ರಸ್ತೆ ಅಪಘಾತದಲ್ಲಿ ಸಾವಿಗೀಡಾಗುವ ಹಿಂಬದಿ ಸವಾರ ಅಥವಾ ಇತರ ಪ್ರಯಾಣಿಕರ ಬಂಧುಗಳು ತೃತೀಯ ಪಕ್ಷದ ವಿಮಾ ಸೌಲಭ್ಯಕ್ಕೆ ಅರ್ಹರಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನೀಡಿದೆ.
ಯಡ್ಡಿ ರೆಡ್ಡಿ ಎಂಬವರಿಗೆ ಸೇರಿದ್ದ ಸ್ಕೂಟರಿನಲ್ಲಿ ರಾಮುಲು ಎಂಬವರು ಹಿಂದೆ ಕುಳಿತು ಸವಾರಿ ಮಾಡುತ್ತಿದ್ದ ವೇಳೆ ಅಪಘಾತ ಉಂಟಾಗಿತ್ತು. 1996ರ ಅಕ್ಟೋಬರ್ 8ರಲ್ಲಿ ವಾಹನ ಅಪಘಾತಕ್ಕೀಡಾದ ವೇಳೆ ಮೊಹಮ್ಮದ್ ಯಾಸಿನ್ ಎಂಬವರು ಸ್ಕೂಟರ್ ಚಲಾಯಿಸುತ್ತಿದ್ದರು.
ಅಪಘಾತದಲ್ಲಿ ಸಾವಿಗೀಡಾಗಿರುವ ರಾಮುಲು ಅವರ ವಿಧವೆ, ಪುತ್ರ ಹಾಗೂ ತಂದೆ ಅವರುಗಳು ಮೂರು ಲಕ್ಷ ರೂಪಾಯಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ತೃತೀಯ ಪಕ್ಷಗಳು ಮಾತ್ರ ವಿಮಾ ಪಾಲಿಸಿಯ ವ್ಯಾಪ್ತಿಗೆ ಬರುವ ಕಾರಣ ಹಿಂಬದಿ ಸವಾರನ ಬಂಧುಗಳು ಪರಿಹಾರಕ್ಕೆ ಅರ್ಹರಲ್ಲ ಎಂದು ಮೋಟಾರ್ ಆಕ್ಸಿಡೆಂಟ್ ಕ್ಲೇಮ್ಸ್ ಟ್ರಿಬ್ಯುನಲ್ ತೀರ್ಪು ನೀಡಿತ್ತು. ಆದರೆ, ಆಂಧ್ರ ಪ್ರದೇಶ ಹೈಕೋರ್ಟ್ ಇದಕ್ಕೆ ವಿರುದ್ಧವಾದ ತೀರ್ಪು ನೀಡಿ ಮೃತ ಸಂಬಂಧಿಕರಿಗೆ ಪರಿಹಾರ ನೀಡುವಂತೆ ಯುನೈಟೆಡ್ ಇನ್‌ಶೂರೆನ್ಸ್ ಕಂಪೆನಿಗೆ ನಿರ್ದೇಶನ ನೀಡಿತ್ತು.
ಹೈಕೋರ್ಟ್ ತೀರ್ಪನ್ನು ವಿಮಾ ಕಂಪೆನಿಯು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ವಿಮಾ ನ್ಯಾಯಾಧಿಕರಣದ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್, ಹಿಂದಿನ ತೀರ್ಪುಗಳ ದೃಷ್ಟಾಂತ ನೀಡಿ ಹಿಂಬದಿ ಸವಾರರು ಅಥವಾ ಸರಕು ಸಾಗಟ ವಾಹನಗಳಲ್ಲಿ ಪ್ರಯಾಣಿಸುತ್ತಿರುವ ಇತರ ಪ್ರಯಾಣಿಕರು ತೃತೀಯ ಪಕ್ಷದ ವಿಮಾ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದೆ.
ಹಾಗಾಗಿ ಪ್ರಸ್ತುತ ಪ್ರಕರಣದಲ್ಲಿ ಹಿಂಬದಿ ಸವಾರನ ಬಂಧುಗಳು ಪರಿಹಾರಕ್ಕೆ ಅರ್ಹರಲ್ಲ ಎಂಬುದಾಗಿ ಅರಿಜಿತ್ ಪಸಾಯತ್ ಮತ್ತು ಮುಕುಂದಾಕಮ್ ಶರ್ಮ ಅವರನ್ನೊಳಗೊಂಡ ನ್ಯಾಯಪೀಠ ತೀರ್ಪು ನೀಡಿದೆ. |