ಜಾಮೀನು ರಹಿತ ವಾರಂಟು ಹೊರಡಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಮಜಗಾಂವ್ ನ್ಯಾಯಾಲಯದಲ್ಲಿ ಶರಣಾಗಿರುವ, ಮಹಾರಾಷ್ಟ್ರ ನವನಿರ್ಮಾಣ ಸೇನಾದ ಮುಖ್ಯಸ್ಥ ರಾಜ್‌ಠಾಕ್ರೆ ಅವರನ್ನು ಬಂಧಿಸಿ ಬಳಿಕ ಜಾಮೀನು ಮೇಲೆ ಬಿಡುಗಡೆ ಮಾಡಲಾಯಿತು.50 ಸಾವಿರ ರೂಪಾಯಿ ಮುಚ್ಚಳಿಕೆ ಪತ್ರದ ಆಧಾರದಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. ಚಾತ್ ಪೂಜೆಯ ಕುರಿತು ಉದ್ರೇಕಕಾರಿ ಹೇಳಿಕೆಯನ್ನು ನೀಡಿರುವುದಕ್ಕೆ ಮತ್ತು ಈ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವ ಹಿನ್ನೆಲೆಯಲ್ಲಿ ರಾಜ್ ವಿರುದ್ಧ ಜೆಮ್‌ಶೆಡ್‌ಪುರ ನ್ಯಾಯಾಲಯ ವಾರಂಟ್ ಹೊರಡಿಸಿತ್ತು.ನ್ಯಾಯಾಲಯದ ಮುಂದೆ ಹಾಜರಾದ ರಾಜ್‌ಠಾಕ್ರೆಯನ್ನು ಬಂಧಿಸಬೇಕೇ ಇಲ್ಲವೇ, ಇಲ್ಲ ಮುಂಬೈ ಪೊಲೀಸರು ಹೇಳಿರುವಂತೆ ವಾರಂಟ್ ಜಾರಿಗೊಳಿಸುವ ವೇಳೆಗೆ ಅವರ ಬಂಧನವಾಗಿದೆಯೇ ಎಂಬ ಕುರಿತು ನ್ಯಾಯಾಲಯದಲ್ಲಿ ಕೊಂಚ ಹೊತ್ತು ಗೊಂದಲ ಉಂಟಾಗಿತ್ತು.ರಾಜ್ ಅವರು ವಕೀಲರು, ತಮ್ಮ ಕಕ್ಷಿದಾರ ನ್ಯಾಯಾಲಯದಲ್ಲಿ ಶರಣಾದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಿದರು.ಜೆಮ್‌ಶೆಡ್‌ಪುರ ಪೊಲೀಸರು ಅಕ್ಟೋಬರ್ 20ರಂದು ಜಾಮೀನು ರಹಿತ ವಾರಂಟನ್ನು ರಾಜ್‌ಠಾಕ್ರೆ ಹೆಸರಿಗೆ ಮುಂಬೈ ಪೊಲೀಸರಿಗೆ ರವಾನಿಸಿದ್ದರು. ಅವರು ಬಿಹಾರಿಗಳ ಕುರಿತು ಅವಮಾನಕರ ಹೇಳಿಕೆ ನೀಡಿದ್ದಾರೆಂದು ವಾರಂಟ್ ಹೊರಡಿಸಲಾಗಿತ್ತು. |