ಭಾರೀ ಹಿಮಪಾತ ಮತ್ತು ಉಗ್ರರ ಬೆದರಿಕೆಯ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ಏಳು ಹಂತದ ಚುನಾವಣೆಯ ಮೊದಲ ಸುತ್ತಿನ ಮತದಾನ ಸೋಮವಾರ ಬೆಳಿಗ್ಗೆ ಆರಂಭಗೊಂಡಿದೆ.
ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ 10 ವಿಧಾನಸಭೆ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಆರಂಭಗೊಂಡಿದ್ದು, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ
ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ರೋಚಕ ಪ್ರತಿಸ್ಪರ್ಧೆಯಾಗಿ ಬಿಂಬಿತವಾಗಿರುವ ಈ ಚುನಾವಣೆಯಲ್ಲಿ ಆರು ಲಕ್ಷ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿ 10 ನೇತಾರರನ್ನು ಆರಿಸಲಿದ್ದಾರೆ. 102 ಅಭ್ಯರ್ಥಿಗಳ ರಾಜಕೀಯ ಅದೃಷ್ಟವೂ ಸೋಮವಾರ ನಿರ್ಧಾರಿತವಾಗಲಿದೆ.
ಬಂಡೀಪುರ ಮತ್ತು ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಪ್ರತ್ಯೇಕತಾ ವಾದಿಗಳ ಮತದಾನ ವಿರೋಧಿ ಜಾಥಗಳನ್ನು ತಡೆಗಟ್ಟಲು ಅಭೂತಪೂರ್ವ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಹುರಿಯತ್ ಕರೆ ನೀಡಿರುವ ಮತದಾನ ಬಹಿಷ್ಕರಣೆ ಬಗ್ಗೆ ಪ್ರಶ್ನಿಸಿದಾಗ, ಡಿಜಿಪಿ ಕುಲ್‌ದೀಪ್ ಖೋಡಾ, "ಇದರಲ್ಲಿ ಹೊಸದೇನು ಇಲ್ಲ. ನಾವು ಕಾನೂನು ಸುವ್ಯವಸ್ಥೆಯನ್ನು ಹಿಡಿತದಲ್ಲಿರಿಸಿಕೊಂಡು ಜನರು ಯಾವುದೇ ಭಯಾಂತಕಗಳಿಲ್ಲದೆ ಮತ ಚಲಾಯಿಸಲು ಅವಕಾಶ ಕಲ್ಪಿಸಿಕೊಡುತ್ತೇವೆ" ಎಂದು ಭರವಸೆ ನೀಡಿದ್ದಾರೆ.
"10-15 ಅಡಿ ಹಿಮಪಾತಕ್ಕೆ ಒಗ್ಗಿರುವ ಇಲ್ಲಿನ ಜನರ ಮೇಲೆ ಪ್ರಸ್ತುತ ಆರು ಅಡಿ ಹಿಮಪಾತ ಪರಿಣಾಮ ಬೀರಲಾರದು" ಎಂದು ಕಾಶ್ಮೀರದ ವಿಭಾಗೀಯ ಕಮಿಷನರ್ ಮಹಸೂದ್ ಸೈಮನ್ ಹೇಳಿದ್ದಾರೆ.
ಬಂಡೀಪೊರದಲ್ಲಿನ 50, ಲೆಹ್‌ದಲ್ಲಿನ 15 ಮತ್ತು ಕಾರ್ಗಿಲ್‌ನಲ್ಲಿರುವ 24 ಚುನಾವಣಾ ಕೇಂದ್ರಗಳನ್ನು ಸೂಕ್ಷ್ಮ ಪ್ರದೇಶಗಳಾಗಿ ಘೋಷಿಲಾಗಿದೆ. ಕಾರ್ಗಿಲ್‌ನಲ್ಲಿ 948 ಭದ್ರತಾ ಸಿಬ್ಬಂದಿ, ಲೆಹ್‌ನಲ್ಲಿ 956 ಮತ್ತು ಬಂಡೀಪುರದಲ್ಲಿ 952 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಉಳಿದ ಆರು ಹಂತದ ಚುನಾವಣೆಗಳು ನವೆಂಬರ್ 23, 30 ಮತ್ತು ಡಿಸೆಂಬರ್ 7, 13, 17 ಮತ್ತು 24ರಂದು ನಡೆಯಲಿದೆ. |