ಮುಂಬೈ: ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆಸಿರುವ ಸ್ಫೋಟಕ್ಕೆ ಬಂಧಿತ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಸೇನೆಯಿಂದ ಎಗರಿಸಿದ್ದ 60 ಕಿಲೋ ಆರ್‌ಡಿಎಕ್ಸ್ ಬಳಸಿದ್ದರೆಂಬ ಹೇಳಿಕೆಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ಭಾನುವಾರ ತಳ್ಳಿ ಹಾಕಿದೆ.
ಶನಿವಾರ ನಾಸಿಕ್ ನ್ಯಾಯಾಲಯದೆದುರು ಎಟಿಎಸ್ ಅನ್ನು ಪ್ರತಿನಿಧಿಸುತ್ತಿರುವ ಸರಕಾರಿ ವಕೀಲ ಅಜಯ್ ಮಿಸರ್ ಅವರು, ಸೇನೆಯಿಂದ ಅಪಹರಿಸಲಾಗಿರುವ ಆರ್‌ಡಿಎಕ್ಸನ್ನು ಸಂಜೋತಾ ರೈಲು ಸ್ಫೋಟಕ್ಕೆ ಬಳಸಲಾಗಿದೆ ಎಂದು ಹೇಳಿದ್ದರು. ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಅವರನ್ನು ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಆದರೆ, ತನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂಬುದಾಗಿ ಅವರು ಭಾನುವಾರ ಹೇಳಿದ್ದಾರೆ. "ಮಾಲೆಗಾಂವ್ ಸ್ಫೋಟ ಸೇರಿದಂತೆ ರಾಷ್ಟ್ರಾದ್ಯಂತ ನಡೆಸಲಾಗಿರುವ ಸ್ಫೋಟಗಳಲ್ಲಿ 60 ಕಿಲೋ ಆರ್‌ಡಿಎಕ್ಸ್ ಬಳಸಲಾಗಿದೆಯೇ ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕಾಗಿದೆ ಎಂದು ತಾನು ನ್ಯಾಯಾಲಯದಲ್ಲಿ ಹೇಳಿದ್ದೆ. ತನ್ನ ವಾಕ್ಯವನ್ನು ಕೆಲವು ಪತ್ರಿಕೆಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ" ಎಂದು ಮಿಸರ್ ಹೇಳಿದ್ದಾರೆ.
"ಮಿಸರಿ ನ್ಯಾಯಾಲಯದಲ್ಲಿ ಏನು ಹೇಳಿದ್ದಾರೆಂದು ನನಗೆ ತಿಳಿದಿಲ್ಲ. ಅದೇನೆಂದು ನಾನು ಪರೀಕ್ಷಿಸಬೇಕಿದೆ. ನಾವು ರಿಮಾಂಡ್ ಪೇಪರ್‌ಗಳಲ್ಲಿ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದಲ್ಲಿ ಆರ್‌ಡಿಎಕ್ಸ್ ಬಳಕೆಯನ್ನು ಪ್ರಸ್ತಾಪಿಸಿರಲಿಲ್ಲ. ಇಂತಹವುಗಳನ್ನು ಸಾಕ್ಷಿ ಇಲ್ಲದೆ ಎಟಿಎಸ್ ಹೇಳಲಾರದು" ಎಂದು ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಹೇಳಿದ್ದಾರೆ.
ಸುಮಾರು 70 ಮಂದಿಯನ್ನು ಬಲಿತೆಗೆದುಕೊಂಡಿರುವ ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ಸ್ಫೋಟದ ಫಾರೆನ್ಸಿಕ್ ವಿಶ್ಲೇಷಣಾ ವರದಿಯು, ಸ್ಫೋಟಕ್ಕೆ ಅತಿಬೇಗ ಜ್ವಾಲೆ ಉರಿಸುವ ಇಂಧನ ತೈಲಗಳ ಮಿಶ್ರಣ, ಪೊಟಾಶಿಯಂ ಕ್ಲೋರೈಡ್ ಮತ್ತು ಸಲ್ಪರ್ ಬಳಸಲಾಗಿತ್ತು ಎಂದು ಹೇಳಿತ್ತು.
ಮಿಸರ್ ಅವರು ಶನಿವಾರ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆ ಪ್ರಕಾರ ಪುರೋಹಿತ್ 60 ಕೆಜಿ ಆರ್‌ಡಿಎಕ್ಸ್ ಅನ್ನು ಭಗವಾನ್ ಎಂಬಾತನಿಗೆ ಹಸ್ತಾಂತರಿಸಿದ್ದು, ಈತ ಈ ಸ್ಫೋಟಕ ವಸ್ತುವನ್ನು ಸಂಜೋತ ರೈಲು ಸ್ಫೋಟಕ್ಕೆ ಬಳಸಿದ್ದ.
"ನಾಸಿಕ್‌ನ ದಿಯೋಲಾಲಿ ಎಂಬಲ್ಲಿ ಪುರೋಹಿತ್ ನಿಯೋಜಿತವಾಗಿದ್ದ ವೇಳೆ ಪುರೋಹಿತ್ ಬಳಿ 60 ಕೆಜಿ ಆರ್‌ಡಿಎಕ್ಸ್ ಇತ್ತು. ಪುರೋಹಿತ್ ಇದನ್ನು ಜಮ್ಮು ಮತ್ತು ಕಾಶ್ಮೀರದ ಶಸ್ತ್ರಾಗಾರದಲ್ಲಿ ಇರಿಸಬೇಕಿತ್ತು. ಶಸ್ತ್ರಾಗಾರದಲ್ಲಿ ಅದನ್ನು ಇರಿಸುವ ಬದಲಿಗೆ, ತಾನದನ್ನು ಜಮ್ಮು ಕಾಶ್ಮೀರದ ಜೀಲಂ ನದಿಗೆ ಎಸೆದಿರುವುದಾಗಿ ಹೇಳಿದ್ದರು. ಬಳಿಕ ಪುರೋಹಿತ್ ಅದನ್ನು ಭಗವಾನ್ ಎಂಬಾತನಿಗೆ ಹಸ್ತಾಂತರಿಸಿದ್ದು, ಭಗವಾನ್ ಅದನ್ನು ಸಂಜೋತಾ ರೈಲು ಸ್ಫೋಟಕ್ಕೆ ಬಳಸಿದ್ದ" ಎಂಬುದಾಗಿ ಪ್ರತ್ಯಕ್ಷದರ್ಶಿಯೊಬ್ಬ ಹೇಳಿರುವುದಾಗಿ, ಪುರೋಹಿತ್‌ನ ಪೊಲೀಸ್ ವಶವನ್ನು ವಿಸ್ತರಿಸಬೇಕು ಎಂದು ಸಿಜೆಎಂ ಎಚ್.ಕೆ.ಗಣತ್ರ ಅವರನ್ನು ವಿನಂತಿಸುವ ವೇಳೆಗೆ ಮಿಸರ್ ನ್ಯಾಯಾಲಯಕ್ಕೆ ತಿಳಿಸಿದ್ದರು.
ಕುತೂಹಲಕಾರಿ ಎಂಬಂತೆ, ಸರಕಾರಿ ವಕೀಲ ಮಿಸರ್ ಅವರು, 60 ಕೆಜಿ ಆರ್‌ಡಿಎಕ್ಸ್ ಕಾಣೆಯಾಗಿರುವ ಕುರಿತು ಸೇನೆಯು ಆಂತರಿಕ ತನಿಖೆ ನಡೆಸಿದೆಯೇ, ಅಥವಾ ಸಂಜೋತಾ ರೈಲು ಸ್ಫೋಟಕ್ಕೆ ಎಷ್ಟು ಆರ್‌ಡಿಎಕ್ಸ್ ಬಳಸಲಾಗಿದೆ ಎಂಬುದನ್ನು ನ್ಯಾಯಾಲಯದಲ್ಲಿ ಹೇಳಿರಲಿಲ್ಲ. ಬದಲಿಗೆ ಶನಿವಾರದ ತನ್ನ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ ಎಂಬುದಾಗಿ ಭಾನುವಾರ ಹೇಳಿಕೆ ನೀಡಿದ್ದಾರೆ. |