ಜೈಲಿನಲ್ಲಿ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ದ ಅಧಿಕಾರಿಗಳು ಮಾಲೆಗಾಂವ್ ಸ್ಫೋಟ ಪ್ರಕಣದ ಶಂಕಿತ ಆರೋಪಿಯಾಗಿರುವ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಚಿತ್ರಹಿಂಸೆ ನೀಡುತ್ತಿರುವುದಾಗಿ ವಕೀಲರು ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಜೈಲಿನಲ್ಲಿ ಎಟಿಎಸ್ ಅಧಿಕಾರಿಗಳು ಮಾನಸಿಕವಾಗಿ ಕಿರುಕುಳ ನೀಡುತ್ತಿರುವುದರಿಂದ,ತಾನು ಆತ್ಮಹತ್ಯೆಗೆ ಶರಣಾಗುವುದಾಗಿ ಪ್ರಗ್ಯಾ ಸಿಂಗ್ ಅಲವತ್ತುಕೊಂಡಿದ್ದಾರೆ.
ತನ್ನ ವಿರುದ್ಧ ದಾಖಲಾಗಿರುವ ಆರೋಪಪಟ್ಟಿ ಇಂಗ್ಲಿಷ್‌ನಲ್ಲಿದ್ದು ಅದು ತನಗೆ ಅರ್ಥವಾಗುವುದಿಲ್ಲ, (ಮುಜೆ ಮಾಲೂಮ್ ನಹಿ,ಮೇರಾ ಕಸೂರ್ ಕ್ಯಾ ಹೈ) ಆ ನಿಟ್ಟಿನಲ್ಲಿ ಅದರ ಹಿಂದಿ ತರ್ಜುಮೆಯನ್ನು ತನ್ನ ವಕೀಲರಿಗೆ ನೀಡಬೇಕೆಂದು ಸಾಧ್ವಿ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಿದ್ದಾರೆ.
ಒಂಬತ್ತು ಸ್ಫೋಟ ಪ್ರಕರಣದ ಆರೋಪಿಗಳನ್ನು ಸೋಮವಾರ ಪೊಲೀಸರು ನಾಸಿಕ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಶಂಕಿತ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮಂಗಳವಾರ ಅಂತಿಮಗೊಳ್ಳಲಿದ್ದು, ಅವರ ಬಂಧನದ ಅವಧಿಯನ್ನು ವಿಸ್ತರಿಸುವಂತೆ ಕೋರಿ ಇಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.
ಅಡಿಷನಲ್ ಮ್ಯಾಜಿಸ್ಟ್ರೇಟ್ ಎಚ್.ಕೆ.ಗಣಾತ್ರಾ ಅವರ ಮುಂದೆ ಕ್ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದಲ್ಲಿ ಅಭಿನವ್ ಭಾರತ್ ಸದಸ್ಯರಾದ ಸಮೀರ್ ಕುಲಕರ್ಣಿ ಮತ್ತು ಆರ್ಮಿ ಮಾಜಿ ಅಧಿಕಾರಿ ರಮೇಶ್ ಉಪಾಧ್ಯಾಯ್ ಹಾಗೂ ಐದು ಮಂದಿ ಆರೋಪಿಗಳನ್ನು ಬಿಗಿಬಂದೋಬಸ್ತ್‌ನಲ್ಲಿ ಹಾಜರುಪಡಿಸಲಾಯಿತು.
ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ಮಹಾರಾಷ್ಟ್ರ ಎಟಿಎಸ್ ಪೊಲೀಸರು ಗುಜರಾತ್‌ನ ಸೂರತ್‌ನಲ್ಲಿ ಬಂಧಿಸಿದ್ದರು.
ನ.29ರವರೆಗೆ ನ್ಯಾಯಾಂಗ ಬಂಧನ: ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಸೇರಿದಂತೆ 8ಮಂದಿ ಆರೋಪಿತರಿಗೆ ನ.29ರವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿದೆ. ಆದರೆ ಶಂಕಿತ ಒಂಬತ್ತು ಮಂದಿ ಆರೋಪಿತರ ತನಿಖೆಗೆ ಅವಕಾಶ ನೀಡಬೇಕೆಂಬ ಗುಜರಾತ್ ಪೊಲೀಸರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. |