ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ದಯಾನಂದ ಪಾಂಡೆ ಜತೆಗೆ ರಾಜ್ಯದ ಮಾಜಿ ರಾಜ್ಯಪಾಲ, ನಿವೃತ್ತ ಲೆಫ್ಟಿನೆಂಟ್ ಜನರಲ್ ಎಸ್.ಕೆ.ಸಿನ್ನಾ ಅವರು ಸಖ್ಯ ಹೊಂದಿದ್ದು, ಅವರ ವಿರುದ್ಧ ಕೇಂದ್ರ ತನಿಖೆ ನಡೆಸಬೇಕು ಎಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖಂಡರಾದ ಮುಫ್ತಿ ಮೊಹಮ್ಮದ್ ಸೈಯದ್ ಅವರು ಸೋಮವಾರ ಆಗ್ರಹಿಸಿದ್ದಾರೆ.
ಆದರೆ ಸೈಯದ್ ಅವರ ಆರೋಪವನ್ನು ಸಿನ್ನಾ ಅವರು ಅಲ್ಲಗಳೆದಿದ್ದು, ಇದು ಸಂಪೂರ್ಣ ಸುಳ್ಳುನಿಂದ ಕೂಡಿದ ಆರೋಪವಾಗಿದೆ. ನನಗೆ ಆತನ(ಪಾಂಡೆ) ಪರಿಚಯವೇ ಇಲ್ಲ, ನಾನು ಯಾವತ್ತೂ ಪಾಂಡೆಯನ್ನು ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಾಂಡೆ 2007ರಲ್ಲಿ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಆತ ಮಾಜಿ ಗವರ್ನರ್ ಅವರ ಅತಿಥಿಯಾಗಿದ್ದು, ಶ್ರೀನಗರದ ರಾಜಭವನದಲ್ಲಿ ವಾಸ್ತವ್ಯ ಹೂಡಿರುವುದಾಗಿ ಸೈಯದ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಗಂಭೀರವಾಗಿ ಆರೋಪಿಸಿದ್ದರು.
ಇದರಿಂದ ಪಾಂಡೆ ಹಾಗೂ ಮಾಜಿ ರಾಜ್ಯಪಾಲರ ನಡುವೆ ಸಖ್ಯ ಹೊಂದಿರುವುದು ಖಚಿತವಾಗುತ್ತದೆ, ಈ ಕುರಿತು ತನಿಖೆ ನಡೆಸಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಅಲ್ಲದೇ ಸ್ಫೋಟ ಪ್ರಕರಣದ ಶಾಮಿಲಾತಿ ಕುರಿತಂತೆ ಅಗತ್ಯ ಬಿದ್ದರೆ ಮತ್ತಷ್ಟು ಆರ್ಮಿಯ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕಾದ ಅಗತ್ಯತೆ ಇದೆ ಎಂದು ಅವರು ತಿಳಿಸಿದರು.
ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ಸ್ವಾಮಿ ಪಾಂಡೆಯನ್ನು ನವೆಂಬರ್ 12ರಂದು ಬಂಧಿಸಲಾಗಿತ್ತು. ಪಾಂಡೆಗೆ ನಾಸಿಕ್ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. |