ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸ್ ಬಂಧನಕ್ಕೀಡಾಗಿರುವ ಸೇವಾನಿರತ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್, ಸೇನೆಯಿಂದ ಅಪಹರಿಸಿರುವ 60ಕಿಲೋ ಆರ್‌ಡಿಎಕ್ಸನ್ನು ಸಂಜೋತಾ ರೈಲು ಸ್ಫೋಟಕ್ಕೆ ಬಳಸಿದ್ದಾರೆ ಎಂಬ ಹೇಳಿಕೆ ನೀಡಿರುವ ಮುಂಬೈ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತೀವ್ರ ಮುಜುಗರಕ್ಕೆ ಮತ್ತು ಕೇಂದ್ರದ ಒತ್ತಡಕ್ಕೆ ಒಳಗಾಗಿದೆ.
ಬಂಧಿತ ಪುರೋಹಿತ್‌ನನ್ನು ಇನ್ನಷ್ಟು ದಿನ ಪೊಲೀಸ್ ವಶಕ್ಕೆ ನೀಡಬೇಕು ಎಂದು ನ್ಯಾಯಾಲಯದ ಮುಂದೆ ಅರಿಕೆ ಮಾಡುವ ವೇಳೆ, ಸರಕಾರಿ ವಕೀಲ ಅಜಯ್ ಮಿಸರ್ ಅವರು ಪುರೋಹಿತ್ ಆರ್‌ಡಿಎಕ್ಸ್ ಅಪಹರಿಸಿರುವ ಹೇಳಿಕೆ ನೀಡಿದ್ದರು. ಆದರೆ ಮರುದಿನ ತನ್ನ ಹೇಳಿಕೆಗಳನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿ ತಿರುಚಿವೆ ಎಂಬ ಹೇಳಿಕೆ ನೀಡಿದ್ದರು.
ಮಿಸರ್ ಅವರು ನ್ಯಾಯಾಲಯದಲ್ಲಿ ಮಾಡಿರುವ ಉದ್ರೇಕಕಾರಿ ಆರೋಪದ ಬಳಿಕ, ತನಿಖೆಯನ್ನು ನಿಕಟವಾಗಿ ಗಮನಿಸುತ್ತಿರುವ ಇಂಟಲಿಜೆನ್ಸ್ ಬ್ಯೂರೋ ಕೇಂದ್ರವನ್ನು ಈ ಕುರಿತು ಎಚ್ಚರಿಸಿತ್ತು. ಬ್ಯೂರೋ ಪತ್ತೆ ಮಾಡಿರುವ ಅಂಶಗಳ ಆಧಾರದಲ್ಲಿ ಕೇಂದ್ರವು ಸಂಜೋತಾ ರೈಲು ಸ್ಫೋಟಕ್ಕೆ ಐಎಸ್ಐ ಕಾರಣ ಎಂಬ ಹೇಳಿಕೆ ನೀಡಿತ್ತು.
"ಇದೀಗ ಎಟಿಎಸ್ ಮಾಡಿರುವ ಆರೋಪವು ಅಂತಾರಾಷ್ಟ್ರೀಯವಾಗಿ ಕೇಂದ್ರದ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆಯುಂಟುಮಾಡಿದೆ. ಕೇಂದ್ರಸರಕಾರವು ಅಮೆರಿಕ ಮತ್ತು ಇತರ ರಾಷ್ಟ್ರಗಳ ತನ್ನ ಸಹವರ್ತಿಗಳಿಗೆ ಐಎಸ್ಐ ಪಾತ್ರದ ಕುರಿತು ತನಿಖೆಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡುತ್ತಿತ್ತು. ಆದರೆ ಇದಕ್ಕೆ ವೈರುಧ್ಯವೆಂಬಂತೆ ಇಲ್ಲಿ ಎಟಿಎಸ್ ಸೇವಾನಿರತ ಸೇನಾಧಿಕಾರಿಯೊಬ್ಬ ಸ್ಫೋಟದ ಸಂಚನ್ನು ರೂಪಿಸಿರುವುದಾಗಿ ಹೇಳುತ್ತಿದೆ. ಸ್ಫೋಟ ನಡೆಸಿರುವ ಜಾಗದ ವಸ್ತುಗಳ ಫಾರೆನ್ಸಿಕ್ ಪರೀಕ್ಷೆ ಮತ್ತು ಸ್ಥಳದಲ್ಲಿ ಲಭಿಸಿದ್ದ ಎರಡು ಸ್ಫೋಟಗೊಳ್ಳದ ಬಾಂಬುಗಳು, ಸ್ಫೋಟಕ್ಕೆ ಆರ್‌ಡಿಎಕ್ಸ್ ಬಳಸಲಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು. ಆದರೆ ಎಟಿಎಸ್ ಇದಕ್ಕೆ ವಿರುದ್ಧವಾದ ಆರೋಪಗಳನ್ನು ಮಾಡುತ್ತಿದೆ" ಎಂದು ಗುಪ್ತಚರ ದಳದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆನ್ನಲಾಗಿದೆ.
ಏತನ್ಮಧ್ಯೆ, ಅಹಮದಾಬಾದ್, ದೆಹಲಿ, ಮುಂಬೈಯ 7/11ರ ಸ್ಫೋಟಗಳಿಗೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹಿದೀನ್ ಪಾತ್ರದ ಕುರಿತು ಮುಂಬೈ ಅಪರಾಧ ಪತ್ತೆ ದಳದ ತನಿಖೆಯನ್ನು ಕೇಂದ್ರವು ಪ್ರಶಂಸಿದೆ ಎಂದೂ ಹೇಳಲಾಗಿದೆ.
ಹಲವು ಸ್ಫೋಟಗಳಿಗೆ ಸಂಬಂಧಿಸಿದಂತೆ, ಕ್ರೈಂ ಬ್ರಾಂಚ್ ಅಧಿಕಾರಿಗಳು 20 ಮಂದಿಯನ್ನು ಬಂಧಿಸಿದ್ದು, ಬಂಧಿತರು ವಿವಿಧ ಸ್ಫೋಟಗಳಲ್ಲಿ ತಮ್ಮ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಮಾನವ ಹಕ್ಕುಗಳ ಕಾರ್ಯಕರ್ತರು, ಅಲ್ಪಸಂಖ್ಯಾತ ನಾಯಕರುಗಳಿಗೆ ಬಂಧಿತರನ್ನು ಪೊಲೀಸರ ಉಪಸ್ಥಿತಿಯಿಲ್ಲದೆ ಭೇಟಿಯಾಗಲು ಅವಕಾಶ ನೀಡಲಾಗಿದ್ದು ಪ್ರಶ್ನಿಸಲು ಅವಕಾಶ ನೀಡಲಾಗಿತ್ತು. ಆರೋಪಿತರನ್ನು ಭೇಟಿಯಾಗಿರುವವರು, ಬಂಧಿತರಿಗೆ ಯಾವುದೇ ಹಿಂಸೆ ನೀಡಲಾಗಿಲ್ಲ ಮತ್ತು ಅವರು ಸ್ಫೋಟಗಳಲ್ಲಿ ತಮ್ಮ ಕೈವಾಡದ ಕುರಿತು ಸ್ವಯಂ ತಪ್ಪೊಪ್ಪಿಕೊಂಡಿದ್ದಾರೆ ಎಂಬ ಅವಿರೋಧ ನಿರ್ಧಾರಕ್ಕೂ ಬಂದಿದ್ದರು ಎಂದು ವರದಿ ಹೇಳಿದೆ.
ಈ ಎಲ್ಲದರ ಹಿನ್ನೆಲೆಯಲ್ಲಿ 60 ಕಿಲೋ ಆರ್‌ಡಿಎಕ್ಸ್ ಬಳಕೆ ಕುರಿತ ಎಟಿಎಸ್ ಹೇಳಿಕೆ ಮತ್ತು ಹೇಳಿಕೆಯ ಕುರಿತ ಸ್ಪಷ್ಟನೆ ಸಾರ್ವಜನಿಕರಲ್ಲಿ ಹಲವು ಸಂಶಯಗಳನ್ನು ಹುಟ್ಟು ಹಾಕಿದೆ. |