'ಕೊಳಕು ಭಾರತದ ರಾಜಕಾರಣಿ' ಎಂಬ ಇಮೇಜನ್ನು ಬದಲಿಸಬೇಕೆಂಬುದನ್ನು ಒತ್ತಿ ಹೇಳಿರುವ ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ, ಹೆಚ್ಚಿನ ಯವಕ-ಯುವತಿಯರು ರಾಜಕೀಯಕ್ಕೆ ಸೇರುವಂತೆ ಪ್ರೇರೇಪಿಸುವುದರಿಂದ ಈ ಇದನ್ನು ಸಾಧ್ಯವಾಗಿಸಬಹುದು ಎಂದು ಹೇಳಿದ್ದಾರೆ.
"ಕೊಳಕು ಭಾರತೀಯ ರಾಜಕಾರಣಿ ಎಂಬ ಇಮೇಜನ್ನು ತೊಡೆದು ಹಾಕಬೇಕಿರುವುದು ನಮ್ಮ ಕರ್ತವ್ಯ ಎಂಬುದಾಗಿ ನಾನು ನನ್ನ ಸಹ ರಾಜಕಾರಣಿಗಳೊಂದಿಗೆ ಅದರಲ್ಲೂ ವಿಶೇಷವಾಗಿ ನನ್ನದೇ ಪಕ್ಷದ ನಾಯಕರೊಂದಿಗೆ ಹೇಳುತ್ತಿರುತ್ತೇನೆ. ಯುವಕರಲ್ಲಿ ಶ್ರೇಷ್ಠ ಹಾಗೂ ಪ್ರತಿಭಾವಂತರು ರಾಜಕೀಯಕ್ಕೆ ಸೇರಿ ದೇಶಕ್ಕಾಗಿ ಕೊಡುಗೆ ನೀಡಬೇಕಿರುವುದು ಅತ್ಯವಶ್ಯ" ಎಂದು ಆಡ್ವಾಣಿ ಹೇಳಿದ್ದಾರೆ.
'ರಾಷ್ಟ್ರೀಯ ಮೌಲ್ಯಗಳ ಬಿಕ್ಕಟ್ಟು ಮತ್ತು ಅದರ ನಿವಾರಣೆ' ಎಂಬ ವಿಚಾರದ ಕುರಿತು ರಾಷ್ಟ್ರೀಯ ಮೌಲ್ಯಗಳ ಪುನಸ್ಥಾಪನಾ ಪ್ರತಿಷ್ಠಾನವು ಹಮ್ಮಿಕೊಂಡಿದ್ದ ವಿಚಾರಗೊಷ್ಠಿಯಲ್ಲಿ ಅವರ ಮಾತನಾಡುತ್ತಿದ್ದರು.
ಭ್ರಷ್ಟಾಚಾರದಲ್ಲಿ ಭಾರತಕ್ಕೆ 'ಉನ್ನತ' ಸ್ಥಾನ ಲಭಿಸಿರುವ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ನ ವಾರ್ಷಿಕ ವರದಿ ಮತ್ತು ಮಾನವಾಭಿವೃದ್ದಿ ಸೂಚ್ಯಂಕದಲ್ಲಿ ಅತ್ಯಂತ ಕೆಳಗಿನ ಸ್ಥಾನ ಪಡೆದಿರುವುದನ್ನು ಉದಾಹರಿಸಿದ ಅವರು ಇದಕ್ಕೆ ರಾಜಕಾರಣಿಗಳಲ್ಲಿನ ವೃತ್ತಿಪರತೆಯ ಕೊರತೆಯೇ ಕಾರಣ ಎಂದು ನುಡಿದರು.
"ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ರಾಜಕೀಯ ಒಂದು ಉದಾತ್ತ ವೃತ್ತಿಯಾಗಿತ್ತು. ಆದರೆ, ಸ್ವಾತಂತ್ರ್ಯಾ ನಂತರ ನಿಧಾನವಾಗಿ ಇದು ಕರಗುತ್ತಾ ಬಂತು. ದುರಾದೃಷ್ಟವೆಂದರೆ ಇಂದು ಭಾರತದಲ್ಲಿ ರಾಜಕೀಯವನ್ನು ಒಂದು ವೃತ್ತಿಯಾಗಿ ಇಲ್ಲವೆ ಒಂದು ಸಂಸ್ಥೆಯಾಗಿ ನೋಡಲಾಗುತ್ತಿಲ್ಲ, ಬದಲಿಗೆ ಇದನ್ನು ಶುದ್ಧ ವ್ಯವಹಾರ ಎಂಬಂತೆ ನೋಡಲಾಗುತ್ತಿದೆ" ಎಂದು ಆಡ್ವಾಣಿ ಖೇದವ್ಯಕ್ತಪಡಿಸಿದರು.
ಅಷ್ಟಕ್ಕೆ ನಿಲ್ಲಿಸದ ಆಡ್ವಾಣಿ, ಇಂದು ರಾಜಕೀಯದಲ್ಲಿ ಮಾತ್ರ ಮೌಲ್ಯಕುಸಿಯುತ್ತಿರುವುದಲ್ಲ, "ವಕೀಲರು, ನ್ಯಾಯಾಧೀಶರು, ವೈದ್ಯರು...... ಭದ್ರತಾ ಅಧಿಕಾರಿಗಳಲ್ಲೂ ಸಹ ವೃತ್ತಿ ಪರತೆ, ಮತ್ತು ಸಮಗ್ರತೆಯ ಕೊರತೆ ಕಾಣಿಸುತ್ತಿದೆ" ಎಂದು ನುಡಿದರು. ಮಾಧ್ಯಮಗಳಲ್ಲೂ ಈ ಕೊರತೆ ಕಾಣಿಸುತ್ತಿದೆ ಎಂದೂ ಆಡ್ವಾಣಿ ಬೆಟ್ಟು ಮಾಡಿದರು. |