ಲಕ್ನೋ: ನಾಲ್ಕು ತಿಂಗಳ ಹಿಂದೆಯಷ್ಟೆ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಸೇರಿದ್ದ ಮಾಜಿ ವಿದೇಶಾಂಗ ಸಚಿವ ನಟ್ವರ್ ಸಿಂಗ್ ಅವರನ್ನು ಪಕ್ಷವಿರೋಧಿ ಚಟುವಟಿಕೆಯ ಆರೋಪದಲ್ಲಿ ಪಕ್ಷದಿಂದ ಉಚ್ಚಾಟಿಸಲಾಗಿದೆ. ಇದರಿಂದಾಗಿ ಅವರು ಇನ್ನೊಂದು ರಾಜಕೀಯ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದಂತಾಗಿದೆ.
ಆಹಾರಕ್ಕಾಗಿ ತೈಲ ಪ್ರಕರಣದಲ್ಲಿ ಸಿಲುಕಿಕೊಂಡು ಮಂತ್ರಿ ಸ್ಥಾನ ಕಳಕೊಂಡ ನಟ್ವರ್ ಸಿಂಗ್ ಬಳಿಕ ಕಾಂಗ್ರೆಸ್‌ನಿಂದ ಉಚ್ಚಾಟಿತರಾದ ಬಳಿಕ ಬಿಎಸ್ಪಿ ಅಪ್ಪಿದ್ದರು. ಇದೀಗ ಪಕ್ಷವಿರೋಧಿ ಚಟುವಟಿಕೆ, ಅಶಿಸ್ತು, ಮತ್ತು ಪಕ್ಷದ ಮೇಲೆ ವಿಶ್ವಾಸದ ಕೊರತೆಯ ಕಾರಣ ನೀಡಿ ಸಿಂಗ್‌ರನ್ನು ಬಿಎಸ್ಪಿಯಿಂದಲೂ ಉಚ್ಚಾಟನೆ ಮಾಡಲಾಗಿದೆ.
ಕೆಲವು ಗುಪ್ತ ಉದ್ದೇಶಗಳಿಗಾಗಿ ಸಿಂಗ್ ಪಕ್ಷ ಸೇರಿದ್ದರು ಎಂದಿರುವ ಬಿಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್‌ಚಂದ್ರ ಮಿಶ್ರಾ ಅವರು, ತನ್ನ ಯೋಜನೆಗಳು ಫಲಪ್ರದವಾಗುವುದಿಲ್ಲ ಎಂದು ತಿಳಿದಾಗ ಅಶಿಸ್ತಿನ ವರ್ತನೆಗೆ ಮುಂದಾಗಿದ್ದರು ಎಂದು ದೂರಿದರು. ಅವರು ನಟ್ವರ್ ಸಿಂಗ್ ಉಚ್ಚಾಟನೆಯನ್ನು ಘೋಷಿಸುತ್ತಾ ಮಾತನಾಡುತ್ತಿದ್ದರು.
ನುರಿತ ರಾಜಕಾರಣಿಯಾಗಿರುವ ನಟ್ವರ್ ಸಿಂಗ್ ಪಕ್ಷ ಸೇರುವ ವೇಳೆಗೆ ಬಿಎಸ್ಪಿಯು ಇತರ ಪಕ್ಷಗಳಿಗಿಂತ ಭಿನ್ನಎಂದಿದ್ದರು. ಬಿಎಸ್ಪಿಯು ಶಿಸ್ತಿಗೆ ಹೆಚ್ಚಿನ ಮಹತ್ವ ನೀಡುತ್ತದೆ. ಅಂತೆಯೇ ವಿಶ್ವಾಸ ಮತ್ತು ಬಿಎಸ್ಪಿ ಚಳುವಳಿಗೆ ತ್ಯಾಗಮನೋಭಾವವು ಅತ್ಯಗತ್ಯ ಎಂದು ಮಿಶ್ರಾ ಹೇಳಿದರು.
ಹಿರಿಯ ನಾಯಕರಾಗಿರುವ ಸಿಂಗ್ ತನ್ನ ವೈಕ್ತಿಕ ಹಿತಾಸಕ್ತಿಗಳಿಗಿಂತ ಮಿಗಿಲಾಗಿ ಪಕ್ಷದ ಚಳುವಳಿಗಾಗಿ ಕಾರ್ಯನಿರ್ವಹಿಸಬಹುದು ಎಂಬ ಪಕ್ಷದ ಊಹೆ ಸುಳ್ಳಾಗಿದೆ ಎಂದು ಮಿಶ್ರಾ ಖೇದವ್ಯಕ್ತಪಡಿಸಿದರು.
ನಟ್ವರ್ ಸಿಂಗ್ ರಾಜ್ಯಸಭಾ ಸ್ಥಾನಾಕಾಂಕ್ಷಿಯಾಗಿದ್ದರು ಮತ್ತು ಅವರ ಪುತ್ರ ಜಗತ್ ಸಿಂಗ್‌ಗೆ ಜೈಪುರದಿಂದ ಪಕ್ಷದ ಟಿಕೇಟ್ ನೀಡಿದ್ದರೂ, ಭರತ್‍ಪುರ ಕ್ಷೇತ್ರದಿಂದಲೂ ಸ್ಫರ್ಧೆಗೆ ಟಿಕೆಟ್ ಬೇಡಿಕೆ ಇತ್ತಿದ್ದರು. ಪಕ್ಷವು ಅಲ್ಲಿಂದ ಬ್ರಾಹ್ಮಣ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ನಿರ್ಧರಿಸಿದೆ ಎಂದಾಗ ಅವರ ಬೇಡಿಕೆ ತಣ್ಣಾಗಾಯಿತು ಎಂದ ಮಿಶ್ರಾ, ಜಗತ್ ಸಿಂಗ್ ಸಹ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ದೂರಿದರು.
ಜಗತ್ ಮತ್ತು ನಟ್ವರ್ ಸಿಂಗ್ ಇಬ್ಬರೂ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷಕ್ಕೆ ಸೇರಿದ್ದರು. ಇವರಿಬ್ಬರಿಗೂ ಯಾವುದೇ ಹುದ್ದೆ ಅಥವಾ ಸ್ಥಾನದ ಭರವಸೆ ನೀಡಿರಲಿಲ್ಲ ಎಂದು ಮಿಶ್ರಾ ತಿಳಿಸಿದರು.
ಜಗತ್ ಸಿಂಗ್ ಅವರನ್ನು ರಾಜಸ್ಧಾನ ಘಟಕದಿಂದ ಉಚ್ಚಾಟಿಸಲಾಗಿತ್ತು. ಇದೀಗ ನಟ್ವರ್ ಸಿಂಗ್‌ರನ್ನು ಉಚ್ಚಾಟನೆ ಮಾಡಲಾಗಿದೆ. ಜಗತ್ ಸಿಂಗ್ ಸೋಮವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.
|