ತನ್ನ ಸಂಪುಟದಲ್ಲಿರುವ 'ಏಕೈಕ ಗಂಡಸು' ಎಂಬ ಖ್ಯಾತಿಗೆ ಭಾಜನರಾಗಿದ್ದ, ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 91ನೆ ಜಯಂತಿಯನ್ನು ರಾಷ್ಟ್ರವಿಂದು ಆಚರಿಸುತ್ತಿದೆ.ಅತ್ಯಂತ ವರ್ಚಸ್ವೀ ನಾಯಕರಲ್ಲಿ ಇಂದಿರಾ ಪ್ರಿಯದರ್ಶಿನಿ ಗಾಂಧಿ ಒಬ್ಬರಾಗಿದ್ದರು. 15 ವರ್ಷಕ್ಕೂ ಹೆಚ್ಚುಕಾಲ ಅವರು ದೇಶವನ್ನು ಆಳಿದ್ದಾರೆ. ಅವರ ಚಿಂತನೆಗಳು ಮತ್ತು ಆಡಳಿತಾ ಪದ್ಧತಿಯು ದೇಶದ ದಿಕ್ಕನ್ನು ಬದಲಿಸುವಲ್ಲಿ ಅಪಾರಕೊಡುಗೆ ನೀಡಿದೆ.ಹಲವು ಮಂದಿಗೆ ಆದರ್ಶಪ್ರಾಯವಾಗಿದ್ದ ಇಂದಿರಾ, ಅತ್ಯುತ್ತಮ ವಾಗ್ಮಿಯೂ ಆಗಿದ್ದರು. ಇವರು ರಾಷ್ಟ್ರದ ಪ್ರಥಮ ಪ್ರಧಾನಿ ಜವಾಹರ್‌ಲಾಲ್ ನೆಹರೂ ಪುತ್ರಿ. ತನ್ನ ತಂದೆ ಹಾಗೂ ಅಜ್ಜ ಮೋತಿಲಾಲ್ ನೆಹರೂ ರಾಜಕೀಯದಲ್ಲಿ ಪಳಗಿದವರಾಗಿದ್ದ ಕಾರಣ, ರಾಜಕಾರಣ ಅವರ ರಕ್ತದಲ್ಲಿ ಹರಿಯುತ್ತಿತ್ತು ಮತ್ತು ಚಿಕ್ಕಂದಿನಿಂದಲೇ ರಾಜಕೀಯದ ಓನಾಮವನ್ನು ಕಲಿತುಕೊಂಡಿದ್ದರು.ಇಂದಿರಾಗಾಂಧಿ ಕಾಲವಾಗಿ 24 ವರ್ಷಗಳೇ ಸಂದರೂ, ಆ ಬಳಿಕ ಅವರಂತಹ ವರ್ಚಸ್ಸಿನ ಮಹಿಳಾ ನಾಯಕಿಯೊಬ್ಬರು ಹುಟ್ಟಿಬರಲಿಲ್ಲ.1984 ರ ಅಕ್ಟೋಬರ್ 31ರಂದು ತನ್ನ ಅಂಗರಕ್ಷಕರಿಂದಲೇ ಗುಂಡಿಗೆ ಬಲಿಯಾದ ಇಂದಿರಾಗಾಂಧಿ ಪ್ರಧಾನಿ ಪದ ಹೊಂದಿರುವಾಗಲೇ ಸಾವನ್ನಪ್ಪಿದ್ದರು. |