ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಿಸ್ಟರ್ ಅಭಯ ಕೊಲೆ: ಇಬ್ಬರು ಪಾದ್ರಿಗಳ ಸೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಸ್ಟರ್ ಅಭಯ ಕೊಲೆ: ಇಬ್ಬರು ಪಾದ್ರಿಗಳ ಸೆರೆ
ಕೋಟ್ಟಯಂನ ಸೈಂಟ್ ಪಯಸ್ ಕಾನ್ವೆಂಟ್‌ನ ಸಿಸ್ಟರ್ ಅಭಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, 16 ವರ್ಷಗಳ ಬಳಿಕ ಮೊದಲ ಬಂಧನ ಕಾರ್ಯ ನಡೆಸಿರುವ ಸಿಬಿಐ, ಬುಧವಾರ ಇಬ್ಬರು ಪಾದ್ರಿಗಳು ಮತ್ತು ಒಬ್ಬ ಸಿಸ್ಟರ್‌ರನ್ನು ಬಂಧಿಸಿದೆ.

ಕೇರಳದಾದ್ಯಂತ ಚರ್ಚೆಗೆ, ಕುತೂಹಲಕ್ಕೆ ಕಾರಣವಾಗಿದ್ದ ಈ ಪ್ರಕರಣದಲ್ಲಿ ಫಾದರ್ ಥೋಮಸ್ ಎಂ.ಕೊಟ್ಟೂರ್ ಮತ್ತು ಫಾದರ್ ಡಾ.ಇ.ಜೋಸ್ ಪುತ್ರಿಕಯಿಲ್ ಅವರು ಸಿಬಿಐಯಿಂದ ಬಂಧನಕ್ಕೀಡಾಗಿದ್ದಾರೆ. ಅವರನ್ನು ಎರ್ನಾಕುಲಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

1992ರ ಮಾರ್ಚ್ 27ರಂದು ಸಿಸ್ಟರ್ ಅಭಯಳ ಶವವು ಕಾನ್ವೆಂಟಿನ ಬಾವಿಯಲ್ಲಿ ಪತ್ತೆಯಾಗಿತ್ತು. ರಾಜ್ಯ ಮತ್ತು ದೇಶಾದ್ಯಂತ ಕೋಲಾಹಲ ಎಬ್ಬಿಸಿದ ಈ ಪ್ರಕರಣದಲ್ಲಿ, 12 ಸಿಬಿಐ ತಂಡಗಳು ತನಿಖೆ ನಡೆಸಿದ್ದರೂ, ಸತ್ಯಾಂಶ ಬಯಲಿಗೆ ತರಲು ಹಲವಾರು ಒತ್ತಡಗಳ ಕಾರಣದಿಂದ ಸಾಧ್ಯವಾಗಿರಲಿಲ್ಲ. ತನಿಖೆಯ ವಿಳಂಬ ಗತಿಗಾಗಿ ಕಳೆದ ತಿಂಗಳು ಕೇರಳ ಹೈಕೋರ್ಟು ಸಿಬಿಐಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬಳಿಕ, ಸಿಬಿಐಯ ಕೇರಳ ತಂಡವು ತನಿಖೆಯ ಜವಾಬ್ದಾರಿ ಕೈಗೆತ್ತಿಕೊಂಡಿತ್ತು.

ಇದಕ್ಕೆ ಮುನ್ನ ಕೇರಳ ಪೊಲೀಸರು ಇದನ್ನು ಆತ್ಮಹತ್ಯೆಯೆಂದು ಬಿಂಬಿಸಿ ಕೇಸು ಮುಚ್ಚಿ ಹಾಕಿದ್ದರು. ಕ್ರಿಶ್ಚಿಯನ್ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಸಾಕ್ಷಿಯಂತಿದ್ದ ಈ ಪ್ರಕರಣ ಮುಚ್ಚಿ ಹಾಕಲು ಇನ್ನಿಲ್ಲದ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ಮತ್ತಷ್ಟು ಕುತೂಹಲ ಕೆರಳಿಸಿತ್ತು. ಅಭಯಳ ಮರಣೋತ್ತರ ವರದಿಗಳನ್ನು ತಿರುಚಿದ ಪ್ರಸಂಗವೂ ಜರುಗಿತ್ತು.

1996ರಲ್ಲಿ ತನಿಖೆ ನಡೆಸಿದ್ದ ಸಿಬಿಐ, ಇದು ಹತ್ಯೆ ಎಂದು ಹೇಳಿತ್ತಾದರೂ, ಕೊಲೆಗಾರ ಪತ್ತೆಯಾಗಿಲ್ಲ ಎಂದಿತ್ತು. ಇದು ಸ್ಪಷ್ಟವಾದ ಕೊಲೆ ಪ್ರಕರಣ ಎಂದು ತೀರ್ಮಾನಕ್ಕೆ ಬಂದಿದ್ದ ಸಿಬಿಐ ಅಧಿಕಾರಿ ವರ್ಗೀಸ್ ಪಿ.ಥೋಮಸ್ ಅವರು ರಾಜೀನಾಮೆ ನೀಡಬೇಕಾಗಿಬಂದಿತ್ತು.

ಇದೀಗ, ಅಭಯ ಕಲಿಯುತ್ತಿದ್ದ ಮಲಯಾಳಂ ಕಾಲೇಜಿನ ಪ್ರೊಫೆಸರ್ ಆಗಿದ್ದ ಫಾದರ್ ಜೋಸ್ ಮತ್ತು ಕೋಟ್ಟಯಂ ಕ್ಯಾಥೊಲಿಕ್ ಚರ್ಚ್‌ನ ಡಯೋಸಿಯನ್ ಚಾನ್ಸ್‌ಲರ್ ಆಗಿದ್ದ ಥೋಮಸ್ ಕೊಟ್ಟೂರ್ ಅವರೊಂದಿಗೆ, ಅಭಯಳ ಕಾನ್ವೆಂಟ್ ಸಹೋದ್ಯೋಗಿ ಸಿಸ್ಟರ್ ಸೆಫಿ ಎಂಬಾಕೆಯನ್ನೂ ಬಂಧಿಸಲಾಗಿದೆ. ಈ ಮೂವರನ್ನು ಕೂಡ ಕಳೆದ ವರ್ಷ ಬೆಂಗಳೂರಿನಲ್ಲಿ ಸುಳ್ಳುಪತ್ತೆ ಯಂತ್ರ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಕೊನೆಗೂ ಸಿಬಿಐ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಕ್ಕೆ ಅಭಯಳ ವಯೋವೃದ್ಧ ತಂದೆ ಥೋಮಸ್ ಹರ್ಷ ವ್ಯಕ್ತಪಡಿಸಿದ್ದಾರೆ. 'ನಮಗೆ ಮತ್ತಷ್ಟು ಸತ್ಯ ವಿಷಯಗಳು ಹೊರಬರಬೇಕಿದೆ. ಬಂಧನವು ಈ ಪ್ರಕರಣ ಮುಚ್ಚಿ ಹಾಕುವುದಕ್ಕೆ ಮತ್ತಷ್ಟು ಅವಕಾಶ ನೀಡಿದಂತಾಗಿದೆ. ಚಿಂತಿಸಬೇಡಿ. ದೇವರಿದ್ದರೆ, ಈ ಪ್ರಕರಣವು ಬಯಲಾಗಿ, ಸತ್ಯ ಹೊರಬರುತ್ತದೆ' ಎಂದಿದ್ದಾರೆ ಅವರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಿಂದೂ ವ್ಯಕ್ತಿ ಕಾಪಾಡಿದ: ಅತ್ಯಾಚಾರಕ್ಕೊಳಗಾದ ಒರಿಸ್ಸಾ ಸನ್ಯಾಸಿನಿ
ಆರೆಸ್ಸೆಸ್, ಬಜರಂಗದಳ ಉಗ್ರವಾದಿ ಸಂಘಟನೆಗಳಲ್ಲ: ಬ್ರಿಟನ್
ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ: ರಾಹುಲ್
ಇಂದಿರಾ ಗಾಂಧಿ 91ನೆ ಜಯಂತಿ
ಮಹಾರಾಷ್ಟ್ರದಲ್ಲಿ 90% ಹುದ್ದೆ ಹೊಂದಿರುವ ಸ್ಥಳೀಯರು
ಸಾಂವಿಧಾನಿಕ ತಳಪಾಯ ಅಲ್ಲಾಡುತ್ತಿದೆ: ಕೆಜಿಬಿ