ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಶಂಕಿತರು ಒಂದೇ ವೇದಿಕೆಯಲ್ಲಿರುವ ವೀಡಿಯೋ ಒಂದು ಮುಂಬೈ ಪೊಲೀಸರಿಗೆ ಲಭಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಸ್ವಯಂಘೋಷಿತ ಆಧ್ಯಾತ್ಮಿಕ ಗುರು ದಯಾನಂದ ಪಾಂಡೆ ಮತ್ತು ಸಮೀರ್ ಕುಲಕರ್ಣಿ ಅವರುಗಳು 2008ರ ಎಪ್ರಿಲ್ 12ರಂದು ನಡೆದ ಕಾರ್ಯಕ್ರಮ ಒಂದರಲ್ಲಿ ಒಂದೇ ವೇದಿಕೆಯಲ್ಲಿ ಆಸೀನರಾಗಿರುವ ವೀಡಿಯೋ ಎಟಿಎಸ್ ಕೈ ಸೇರಿದೆ.
ಸಮೀರ್ ಕುಲಕರ್ಣಿ ಅವರ ಅಭಿನವ್ ಭಾರತ್ ಸಂಘಟಿಸಿರುವ ಕಾರ್ಯಕ್ರಮದಲ್ಲಿ ಸಾಧ್ವಿ, ಪಾಂಡೆ, ಕುಲಕರ್ಣಿ ಹಾಗೂ ಮತ್ತಿತರರು ವೇದಿಕೆಯಲ್ಲಿರುವ ಚಿತ್ರಣ ಇದಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಟ್ಟರ್ ಹಿಂದೂವಾದಿಯಾಗಿದ್ದ ವಿ.ಡಿ.ಸಾವರ್ಕರ್ ಅವರ ಸಂಬಂಧಿ ಹಿಮಾನಿ ಸಾರ್ವಕರ್ ಈ ಸಂಘಟನೆಯ ಅಧ್ಯಕ್ಷರಾಗಿದ್ದಾರೆ.
ಐದು ಮಂದಿಯನ್ನು ಆಹುತಿ ತೆಗೆದುಕೊಂಡಿರುವ, ಸೆಪ್ಟೆಂಬರ್ 29ರಂದು ನಡೆಸಲಾಗಿರುವ ಮಾಲೆಗಾಂವ್ ಸ್ಫೋಟಕ್ಕೆ ಸಾಧ್ವಿ ಪ್ರಗ್ಯಾಸಿಂಗ್ ಅವರ ದ್ವಿಚಕ್ರ ವಾಹನವನ್ನು ಬಳಸಲಾಗಿದೆ ಎಂದು ಎಟಿಎಸ್ ಆರೋಪಿಸಿದೆ.
ತನ್ನನ್ನು ಅತ್ಯಂತ ಕೆಟ್ಟದಾಗಿ ಎಟಿಎಸ್ ನಡೆಸಿಕೊಳ್ಳುತ್ತಿದ್ದು, ತನ್ನ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಸಾಧ್ವಿ ಪ್ರಗ್ಯಾ ಒಂದು ಹಂತದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ ಎಂಬುದಾಗಿ ನಾಸಿಕ್ ನ್ಯಾಯಾಲಯದಲ್ಲಿ ಸೋಮವಾರ ಅಫಿದಾವಿತ್ ಸಲ್ಲಿಸಿದ್ದರು. |