ಸೆಪ್ಟೆಂಬರ್ 29ರಂದು ನಡೆಸಲಾಗಿರುವ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಶಂಕಿತರ ವಿರುದ್ಧ, ಅತ್ಯಂತ ಕಠಿಣ ಕಾಯ್ದೆಯಾಗಿರುವ ಸಂಘಟಿತ ಅಪರಾಧಗಳ ವಿರುದ್ಧ ಮಹಾರಾಷ್ಟ್ರ ನಿಯಂತ್ರಣ(ಮೋಕಾ)ವನ್ನು ಎಟಿಎಸ್ ಗುರುವಾರ ಹೇರಿದೆ.
ಈ ವಿಚಾರವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಶಂಕಿತನನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದರು.
ಮಾಲೆಗಾಂವ್ ವ್ಯಾಪ್ತಿಗೆ ಬರುವ ನಾಸಿಕ್ ನ್ಯಾಯಾಯದಲ್ಲಿರುವ ಪ್ರಕರಣವನ್ನು ಮುಂಬೈಯಲ್ಲಿರುವ ವಿಶೇಷ ಮೋಕಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗುವುದು ಎಂದೂ ಅವರು ನುಡಿದರು.
ಮೋಕಾ ಕಾಯ್ದೆಯು ಆರೋಪಪಟ್ಟಿ ಸಲ್ಲಿಸುವ ಮುನ್ನ, ಆರೋಪಿಗಳನ್ನು ಮಾಮೂಲಿ ಪ್ರಕರಣಕ್ಕಿಂತ ಹೆಚ್ಚು ಸಮಯ ವಶದಲ್ಲಿರಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.
ಇದುವರೆಗೆ ಸ್ಫೋಟಕ್ಕೆ ಸಂಬಧಿಸಿದಂತೆ ಎಟಿಎಸ್ 10 ಮಂದಿಯನ್ನು ವಶಪಡಿಸಿಕೊಂಡಿದೆ. ಇದಲ್ಲದೆ, ಸೇನೆಯ ನಕಲಿ ಗುರುತು ಚೀಟಿ ಹೊಂದಿರುವ ಆಪಾದನೆಯಲ್ಲಿ ಸುಧಾಕರ್ ಚತುರ್ವೇದಿ ಎಂಬವರನ್ನು ಬಂಧಿಸಲಾಗಿದೆ.
ಆಪಾದಿತರಲ್ಲಿ ಸೇವಾನಿರತ ಸೇನಾಧಿಕಾರಿ ಶ್ರೀಕಾಂತ್ ಪುರೋಹಿತ್, ಸಾಧ್ವಿ ಪ್ರಗ್ಯಾ ಸಿಂಗ್, ಸ್ವಘೋಷಿತ ಸ್ವಾಮಿ ದಯಾನಂದ ಪಾಂಡೆ ಸೇರಿದ್ದಾರೆ.
ಬಂಧಿತರ ವಿರುದ್ಧ ಮೋಕಾದ ಸೆಕ್ಷನ್ 3(1)(i), 3(2) ಮತ್ತು 3(4)ಅನ್ನು ಅನ್ವಯಿಸಲಾಗಿದೆ. ಸೆಕ್ಷನ್ 3(1)(i) ಪ್ರಕಾರ, ಅಪರಾಧ ಸಾಬೀತಾದಲ್ಲಿ ಮರಣದಂಡನೆ ವಿಧಿಸಬಹುದಾಗಿದೆ ಸೆಕ್ಷನ್ 3(2)ರಂತೆ ಸಂಘಟಿತ ಅಪರಾಧದ ಸಂಚುಕೋರರಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದ್ದರೆ, ಸೆಕ್ಷನ್ 3(4) ಪ್ರಕಾರ ಕನಿಷ್ಠ ಐದು ವರ್ಷಗಳ ಜೈಲುಶಿಕ್ಷೆ ವಿಧಿಸಬಹುದಾಗಿದೆ.
ಎಟಿಎಸ್ ಪ್ರಸ್ತುತ ಮಾಲೆಗಾಂವ್ ಸ್ಫೋಟದ ಮೇಲೆ ಮಾತ್ರ ಗಮನಕೇಂದ್ರೀಕರಿಸಿದ್ದು, ಸಂಜೋತ ರೈಲು ಸ್ಫೋಟದ ಕುರಿತು ಅಲ್ಲ ಎಂದು ಎಟಿಎಸ್ ಮುಖ್ಯಸ್ಥರು ಹೇಳಿದರು.
ರಾಜಕೀಯ ಒತ್ತಡವಿಲ್ಲ ಇದೇವೇಳೆ, ವಿರೋಧ ಪಕ್ಷ ಆಪಾದಿಸಿರುವಂತೆ ತನಿಖೆಯ ಮೇಲೆ ರಾಜಕೀಯ ಒತ್ತಡ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. |