ತನ್ನ ಸಂಬಂಧಿಗಳಾದ ಮಾರನ್ ಸಹೋದರರೊಂದಿಗೆ ಮರುಮೈತ್ರಿ ಸಾಧ್ಯವೇ ಇಲ್ಲ ಎಂದಿರುವ ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ, ಮಾರನ್‌ಗಳು ತನ್ನ ಕುಟುಂಬದಲ್ಲಿ ಒಡಕು ತಂದಿದ್ದಲ್ಲದೆ, ಕೇಂದ್ರ ಸಚಿವ ರಾಜಾ ಆವರಂತಹ ತನ್ನ ಪಕ್ಷದ ಸದಸ್ಯರ ವಿರುದ್ಧವೂ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ಡಿಎಂಕೆಯ ಮುಖವಾಣಿ ಮುರಸೋಳಿಯಲ್ಲಿ ಪ್ರಕಟವಾಗಿರುವ ಲೇಖನದಲ್ಲಿ, "ನನ್ನ ಕುಟಂಬದಲ್ಲಿ ವಿವಾದ ಹುಟ್ಟುಹಾಕುವ ಅವರ ಪ್ರಯತ್ನವನ್ನು ನಾನು ಸಹಿಸಿಕೊಳ್ಳಬಹುದು. ಆದರೆ, ನನ್ನ ಸರಕಾರ ಮತ್ತು ನನ್ನ ಪಕ್ಷವನ್ನು ಟೀಕಿಸುವುದನ್ನು ನಾನು ಹೇಗೆ ಸಹಿಸಿಕೊಳ್ಳಲಿ" ಎಂದು ಕರುಣಾನಿಧಿ ಪ್ರಶ್ನಿಸಿದ್ದಾರೆ.
ಮಾರನ್ ಸಹೋದರರ ಒಡೆತನದ ದಿನಕರನ್ ಪತ್ರಿಕೆಯಲ್ಲಿ, ತನ್ನ ಪುತ್ರ ಸ್ಟಾಲಿನ್ ಇತರ ಮಕ್ಕಳಾದ ಅಳಗಿರಿ ಮತ್ತು ಕನಿಮೋಳಿ ಅವರಿಗಿಂತ ಜನಪ್ರಿಯತೆಯಲ್ಲಿ ಮುಂದಿದ್ದು, ಸ್ಟಾಲಿನ್ ಅವರನ್ನು ತನ್ನ ಉತ್ತರಾಧಿಕಾರಿಯಾಗಿಸುವಂತೆ ಸೂಚನೆ ನೀಡಿರುವ ಸಮೀಕ್ಷೆಯು, ತನ್ನ ಮಕ್ಕಳೊಳಗೆ ಪರಸ್ಪರ ದ್ವೇಷ ಹುಟ್ಟಿಕೊಳ್ಳುವಂತೆ ಮಾಡಲಾಗಿರುವ ಹುನ್ನಾರ ಎಂದು ಹೇಳಿದ್ದಾರೆ.
"ಅದೇ ಪತ್ರಿಕೆಯು ಇನ್ನೊಂದು ಸಮೀಕ್ಷೆಯನ್ನು ಪ್ರಕಟಿಸಿತ್ತು. ಮಾರನ್ ಸಹೋದರರ ಕಿರಿಯ ತಮ್ಮ, ಆಗಿನ ಮಾಹಿತಿ ಮತ್ತು ತಾಂತ್ರಿಕ ಸಚಿವ ದಯಾನಿಧಿ ಮಾರನ್ ತಮಿಳ್ನಾಡಿನ ಅತ್ಯಂತ ಸಮರ್ಥ ಸಚಿವ ಎಂದು ಹೇಳಿತ್ತು. ಅತ್ಯಂತ ಸಮರ್ಥ ಹಾಗೂ ಅನುಭವಿ ಮಂತ್ರಿ ಪಿ.ಚಿದಂಬರಂ ಅವರನ್ನು ಎರಡನೇ ಸ್ಥಾನದಲ್ಲಿ, ಟಿ.ಆರ್.ಬಾಲು ಅವರನ್ನು ತೃತೀಯ ಹಾಗೂ ಅನ್ಬುಮಣಿ ರಾಮದಾಸ್ ಅವರನ್ನು ಕೊನೆಯ ಸ್ಥಾನದಲ್ಲಿರಿಸಿತ್ತು" ಎಂದು ಕರುಣಾನಿಧಿ ಹೇಳಿದ್ದಾರೆ.
"ಕೇಂದ್ರ ಸಂಪುಟವನ್ನು ರಾಜ್ಯದ ಮೂರ್ನಾಲ್ಕು ಪಕ್ಷಗಳು ಪ್ರತಿನಿಧಿಸುತ್ತಿರುವ ವೇಳೆಗೆ ಇಂತಹ ಸಮೀಕ್ಷೆಗಳ ಅಗತ್ಯವಿದೆಯೇ? ಇಂತಹ ಸಮೀಕ್ಷೆಗಳ ಸರಣಿಯನ್ನು ಪ್ರಕಟಿಸದಂತೆ ತಾನು ಅವರಿಗೆ ಹೇಳಿದರೂ ಅವರು ನನ್ನ ರಾಜಕೀಯ ಉತ್ತರಾಧಿಕಾರಿಗಳ ಕುರಿತು ಸಮೀಕ್ಷೆಯನ್ನು ಪ್ರಕಟಿಸಿದ್ದಾರೆ" ಎಂದು ದೂರಿದರು.
ಇಂತಹ ಸಮೀಕ್ಷೆಯ ಪ್ರಕಟಣೆಯು ತನ್ನ ಪುತ್ರ ಅಳಗಿರಿಯ ಬೆಂಬಲಿಗರನ್ನು ಸಿಟ್ಟಿಗೆಬ್ಬಿಸಿದ್ದು, ಅವರು ಮಧುರೈಯಲ್ಲಿ ದಿನಕರನ್ ಪತ್ರಿಕಾ ಕಾರ್ಯಾಲಯದ ಎದುರು ಹಿಂಸಾಚಾರ ನಡೆಸಿದ್ದರು ಎಂದು ಕರುಣಾನಿಧಿ ಹೇಳಿದ್ದಾರೆ. |