ಯಾರೇ ಆಗಲಿ, ಭಯೋತ್ಪಾದಕ ಚಟುವಟಿಕೆ ನಡೆಸುವುದನ್ನು ತಾನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಹಿಂದೂ ಮಹಾಸಭಾ, ಮಾಲೆಗಾಂವ್ ಸ್ಫೋಟದ ಶಂಕಿತ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಂದ ಹೆಚ್ಚೂ-ಕಡಿಮೆ ತನ್ನನ್ನು ದೂರವಿರಿಸಿಕೊಂಡಿದೆ. ಅಲ್ಲದೆ, ಮಾಲೆಗಾಂವ್ ಆರೋಪಿಗಳ ಪರ ಧ್ವನಿ ಎತ್ತುವ ಮೂಲಕ ಬಿಜೆಪಿಯು ಹಿಂದೂ ಭಾವನೆಗಳ ದುರ್ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಈ ಹಿಂದೆ ರಾಮ ಜನ್ಮಭೂಮಿ ವಿವಾದದಂತೆ ಬಿಜೆಪಿಯು ಮಾಲೆಗಾಂವ್ ಪ್ರಕರಣದ ಮೂಲಕ ಮತ್ತೊಮ್ಮೆ ರಾಜಕೀಯಕ್ಕಾಗಿ ಹಿಂದೂ ಭಾವನೆಗಳ ದುರ್ಲಾಭ ಪಡೆಯುತ್ತಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ವಕ್ತಾರ ಪ್ರವೀಣ್ ಶರ್ಮಾ ಆರೋಪಿಸಿದ್ದಾರೆ.
ಒಂದಿಲ್ಲೊಂದು ವಿಷಯದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರವು ಹಿಂದೂಗಳನ್ನು ಮೂರ್ಖರನ್ನಾಗಿಸುವುದರಿಂದ ನಮಗೆ ಸಾಕಾಗಿ ಹೋಗಿದೆ. ಈ ದಿನಗಳಲ್ಲಿ ಅವರು ಮಾಲೆಗಾಂವ್ ಸ್ಫೋಟ ಶಂಕಿತರಿಗೆ ಕಾನೂನು ನೆರವು ನೀಡುವ ನೆಪದಲ್ಲಿ ಚಂದಾ ಎತ್ತುತ್ತಿದ್ದಾರೆ. ಈ ಕೃತ್ಯವನ್ನು ಮತ್ತು ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಶರ್ಮಾ ಹೇಳಿದ್ದಾರೆ.
ಮಾಲೆಗಾಂವ್ ಸ್ಫೋಟ ಮತ್ತು ಇತರ ಯಾವುದೇ ಸ್ಫೋಟವನ್ನು ನಾವು ಬೆಂಬಲಿಸುವುದಿಲ್ಲ ಎಂದು ತಿಳಿಸಿರುವ ಅವರು, ಬಿಜೆಪಿಯನ್ನು 'ಭಯೋತ್ಪಾದನೆ ವಿಷಯದಲ್ಲಿ ರಾಜಕೀಯ ಮಾಡುತ್ತಿರುವ ಅವಕಾಶವಾದಿ ಪಕ್ಷ' ಎಂದು ಬಣ್ಣಿಸಿದ್ದಾರೆ.
ಹಿಂದುಗಳಿಗಾಗಿ ಅಥವಾ ಹಿಂದುತ್ವಕ್ಕಾಗಿ ಬಿಜೆಪಿ, ವಿಹಿಂಪ, ಬಜರಂಗ ದಳ, ಆರೆಸ್ಸೆಸ್ ಮತ್ತು ಅಭಿನವ ಭಾರತ್ ಸಂಘಟನೆಗಳು ಇದುವರೆಗೆ ಏನು ಮಾಡಿವೆ ಎಂದು ದಯವಿಟ್ಟು ಹೇಳಿ ಎಂದೂ ಅವರು ಆಗ್ರಹಿಸಿದ್ದಾರೆ. ಹಿಂದೂ ಮಹಾಸಭಾವು ದೆಹಲಿ ಮತ್ತು ರಾಜಸ್ತಾನ ವಿಧಾನಸಭೆಯ ಕೆಲವು ಸ್ಥಾನಗಳಿಗಾಗಿ ಚುನಾವಣಾ ಕಣಕ್ಕಿಳಿದಿದೆ.
ಇನ್ನೊಂದೆಡೆ, ಎಲ್.ಕೆ.ಆಡ್ವಾಣಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿಯು 'ಅಪ್ರಸ್ತುತವಾದ ಭಯೋತ್ಪಾದನೆ' ವಿಷಯ ಮುಂದಿಟ್ಟುಕೊಂಡು ಹಿಂದೂಗಳು ಮತ್ತು ಮುಸ್ಲಿಮರನ್ನು ಪರಸ್ಪರರ ವಿರುದ್ಧ ಎತ್ತಿ ಕಟ್ಟುತ್ತಿದೆ ಎಂದು ಹಿಂದೂ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಚಂದ್ರಪ್ರಸಾದ್ ಕೌಶಿಕ್ ಆರೋಪಿಸಿದ್ದಾರೆ.
ಹಿಂದೂ ಮಹಾಸಭಾ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಪ್ರಕಾಶ್ ಜಾವ್ಡೇಕರ್, 'ಪ್ರತಿಕ್ರಿಯಿಸಿ ಏನು ಪ್ರಯೋಜನ. ಅದರ ರಾಜಕೀಯ ಮಹತ್ವವೇನಾದರೂ ಇದೆಯೇ? ಈ ಆರೋಪಗಳನ್ನು ಕಾಂಗ್ರೆಸ್ ಮಾಡಿದ್ದರೆ ನಾವು ಉತ್ತರಿಸಬಹುದಿತ್ತು' ಎಂದು ನಿರ್ಲಕ್ಷಿಸಿದ್ದಾರೆ. |