ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಅಮೆರಿಕ ವಾಯುಪಡೆಗಳು ನಡೆಸುತ್ತಿರುವ ತೀವ್ರ ವಾಯುಸೇನಾ ಕಾರ್ಯಾಚರಣೆ ಪ್ರಭಾವವು ಭಾರತದ ಮೇಲೆ ತಟ್ಟಲಿದ್ದು, ಅಲ್ ಖಾಯಿದಾ ಉಗ್ರಗಾಮಿಗಳು ಭಾರತದತ್ತ ಮುಖ ಮಾಡುವ ಸಾಧ್ಯತೆಗಳಿವೆ ಎಂದು ಈ ವಿದ್ಯಮಾನಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಭದ್ರತಾ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಈ ಕಾರ್ಯಾಚರಣೆಯು ಅಲ್ ಖಾಯಿದಾ ಸಂಪರ್ಕಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಅಲ್ ಖಾಯಿದಾ ಮತ್ತು ತಾಲಿಬಾನ್ ಉಗ್ರರಿಗೆ ಪಾಕಿಸ್ತಾನದ ಐಎಸ್ಐ ಪ್ರಮುಖ ಪ್ರಾಯೋಜಕ ಆಗಿರುವುದರಿಂದ, ಅದು ಈ ಅಲ್ ಖಾಯಿದಾ ಜಿಹಾದಿಗಳನ್ನು ಕಾಶ್ಮೀರ ವಲಯದಲ್ಲಿ ಹೋರಾಟಕ್ಕೆ 'ಮರುನಿಯೋಜಿಸುವ' ಸಾಧ್ಯತೆಗಳಿವೆ ಎಂಬುದು ಆತಂಕಕ್ಕೆ ಕಾರಣ.
ಪಾಕಿಸ್ತಾನದಲ್ಲಿರುವ ಅಲ್ ಖಾಯಿದಾ ವಿರುದ್ಧ ತಮ್ಮ ರಣತಂತ್ರವನ್ನು ಕಳೆದ ವಾರ ಸಿಐಎ ನಿರ್ದೇಶಕ ಮೈಕೆಲ್ ಹೇಡನ್ ವಾಷಿಂಗ್ಟನ್‌ನಲ್ಲಿ ಬಹಿರಂಗಪಡಿಸಿದ್ದರು. ಪಾಕಿಸ್ತಾನದಲ್ಲಿ ಅಲ್ ಖಾಯಿದಾ ಸ್ಥಾಪಿಸಿಕೊಂಡಿರುವ ಭದ್ರ ನೆಲೆ ಮತ್ತು ಪಶ್ಚಿಮ ರಾಷ್ಟ್ರಗಳನ್ನು ಬೆದರಿಸುವ ಅದರ ಸಾಮರ್ಥ್ಯವೇ ಅದರ ಪುನರುತ್ಥಾನದಲ್ಲಿ ಅತ್ಯಂತ ಮಹತ್ವದ ವಿಚಾರ ಎಂದುಕೊಂಡರೆ ಅದೇನೂ ಅತಿರೇಕದ ಹೇಳಿಕೆಯಾಗದು ಎಂದಿದ್ದರು ಹೇಡನ್.
ವಾಯು ದಾಳಿಗಳು ತಾಲಿಬಾನ್ ಮತ್ತು ಅಲ್ ಖಾಯಿದಾ ಬಣಗಳಿಗೆ ಯೋಚಿಸುವುದಕ್ಕೂ ಅವಕಾಶ ಮಾಡಿಕೊಡುತ್ತಿಲ್ಲ. ಈ ದಾಳಿಗಳ ಅನಿಶ್ಚಿತತೆಯಿಂದಾಗಿ ಕಂಗೆಟ್ಟಿರುವ ತಾಲಿಬಾನ್, ಇದೀಗ ಕಾರ್ಯಾಚರಣೆಗಳಿಗಿಂತಲೂ ತನ್ನ ಸ್ವರಕ್ಷಣೆಯತ್ತ ಹೆಚ್ಚು ಗಮನ ಕೇಂದ್ರೀಕರಿಸಿದೆ. ಇದು ತಾಲಿಬಾನ್ ಪಡೆಗಳ ಸಂಪರ್ಕ ಜಾಲ ಸಾಮರ್ಥ್ಯದ ಮೇಲೂ ಋಣಾತ್ಮಕ ಪ್ರಭಾವ ಬೀರಿದೆ ಎಂದು ಮೂಲಗಳು ಹೇಳಿವೆ.
ಇದಲ್ಲದೆ, ಅಲ್ ಖಾಯಿದಾದ ಸಾಮರ್ಥ್ಯ ಎಂದೇ ಪರಿಗಣಿತವಾಗಿದ್ದ ಅಂತರ್-ಗುಂಪುಗಳ ಸಮನ್ವಯಕ್ಕೂ ಈ ಗೊತ್ತುಗುರಿಯಿಲ್ಲದಂತಿರುವ ದಾಳಿಗಳಿಂದಾಗಿ ಅಡ್ಡಿಯಾಗಿದೆ. ಯೆಮೆನ್, ಸೌದಿ ಅರೇಬಿಯಾ, ಇಂಡೋನೇಷ್ಯಾ ಮತ್ತು ಫಿಲಿಪ್ಪೀನ್ಸ್ ಮುಂತಾದ ರಾಷ್ಟ್ರಗಳು ಇಸ್ಲಾಮಿಕ್ ಉಗ್ರಗಾಮಿ ಬಣಗಳ ನಿಯಂತ್ರಣಕ್ಕೆ ಅನುಸರಿಸುತ್ತಿರುವ ರಾಜತಾಂತ್ರಿಕ ಕ್ರಮಗಳು ಕೂಡ ಅಲ್ ಖಾಯಿದಾ ಆತಂಕದ ಬೆಂಕಿಗೆ ತುಪ್ಪ ಎರೆದಂತಾಗಿದೆ.
ಹೆಚ್ಚಿನ ಗುಪ್ತಚರ ಮಂಡಳಿಗಳು ಹೇಳುತ್ತಲೇ ಬಂದಿರುವ ಮತ್ತು ಪಾಕಿಸ್ತಾನವು ನಿರಾಕರಿಸುತ್ತಲೇ ಬಂದಿರುವ ಒಂದಂಶವನ್ನು ಹೇಡನ್ ಮತ್ತೆ ಸ್ಪಷ್ಟಪಪಡಿಸಿದ್ದರು. ಅದೆಂದರೆ ಪಾಕಿಸ್ತಾನೀ ತಾಲಿಬಾನ್ ಬಣಗಳು ಮತ್ತು ಅಲ್ ಖಾಯಿದಾ ವಿಲೀನಗೊಂಡಿರುವುದು. ಹಾಗಾಗಿ ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್ ಪಡೆಗಳೊಂದಿಗೆ ಸಂಧಾನ ಮಾಡಿಕೊಳ್ಳುವ ಯಾವುದೇ ಯತ್ನವು ಪರೋಕ್ಷವಾಗಿ ಅಲ್ ಖಾಯಿದಾದ ಪುನರುತ್ಥಾನಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬುದು ಮೂಲಗಳ ಅಭಿಪ್ರಾಯ. |