ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಕ್ಸಲ್ ಪಿಡುಗು: ಪ್ರಧಾನಿ, ಗೃಹಸಚಿವರ ಭಿನ್ನ ಹೇಳಿಕೆಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕ್ಸಲ್ ಪಿಡುಗು: ಪ್ರಧಾನಿ, ಗೃಹಸಚಿವರ ಭಿನ್ನ ಹೇಳಿಕೆಗಳು
ಎಡಪಂಥೀಯ ನಕ್ಸಲ್‌ವಾದ ಮತ್ತು ಮಾಧ್ಯಮದವರನ್ನು ನಡೆಸಿಕೊಳ್ಳಬೇಕಾದ ರೀತಿಯ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗೃಹಸಚಿವ ಶಿವರಾಜ್ ಪಾಟೀಲ್ ಹೇಳಿಕೆಗಳಲ್ಲಿ ವ್ಯತಿರಿಕ್ತ ಅಭಿಪ್ರಾಯಗಳು ವ್ಯಕ್ತವಾಗಿವೆ.

ನಕ್ಸಲ್ ಸಮಸ್ಯೆಯನ್ನು "ಗಂಭೀರ ಆಂತರಿಕ ಬೆದರಿಕೆ" ಎಂದು ಭಾನುವಾರ ವ್ಯಾಖ್ಯಾನಿಸಿದ ಪ್ರಧಾನಮಂತ್ರಿ ಹೇಳಿಕೆಯ ಮುನ್ನ ಶನಿವಾರದಂದು ಗೃಹ ಸಚಿವ ಶಿವರಾಜ್ ಪಾಟೀಲ್‌ರವರು, "ಅಗತ್ಯಕ್ಕಿಂತ ಹೆಚ್ಚು ಉತ್ಪ್ರೇಕ್ಷೆ ಮಾಡಲಾಗುತ್ತಿದೆ" ಎಂದು ಹೇಳಿದ್ದರು. ಅದೇ ಹೊತ್ತಿಗೆ ಮಾಧ್ಯಮಗಳ ಬಗೆಗಿನ ಇಬ್ಬರ ಹೇಳಿಕೆಗಳೂ ವ್ಯತಿರಿಕ್ತವಾಗಿವೆ. ಪ್ರಧಾನಿಯವರು ಮಾಧ್ಯಮಗಳಿಗೆ ತನಿಖೆಯ ಬಗ್ಗೆ ಹಂತ ಹಂತವಾಗಿ ಮಾಹಿತಿ ನೀಡುತ್ತಿರಬೇಕೆಂದು ಹೇಳಿದ್ದರೆ, ಗೃಹ ಸಚಿವರು ಮಾಧ್ಯಮಗಳನ್ನು ದೂರವಿಡಬೇಕೆಂದು ಪೊಲೀಸರಿಗೆ ಹೇಳಿದ್ದರು.

ಪೊಲೀಸ್ ಮಹಾನಿರ್ದೇಶಕರ ಸಮ್ಮೇಳನದಲ್ಲಿ ದೇಶದ ಉನ್ನತ ಪೊಲೀಸ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಸಿಂಗ್, "ನಾವೀಗ ಎದುರಿಸುತ್ತಿರುವ ಎಡಪಂಥೀಯ ನಕ್ಸಲ್‌ವಾದ ದೇಶದ ಆಂತರಿಕ ಭದ್ರತೆಗೆ ದೊಡ್ಡ ಬೆದರಿಕೆ. ಈ ಬಗ್ಗೆ ನಾವು ಎಷ್ಟೇ ಕ್ರಮಗಳನ್ನು ಕೈಗೊಂಡಿದ್ದರೂ ನಾವು ಬಯಸಿದ ಸ್ಪಷ್ಟ ಫಲಿತಾಂಶ ಸಿಕ್ಕಿಲ್ಲ. ಬೇಹುಗಾರಿಕಾ ದಳ ಮತ್ತು ಪೊಲೀಸರು ಪ್ರಮುಖ ಮ‌ೂಲಗಳನ್ನು ಗುರುತಿಸಲು ವಿಫಲರಾಗಿದ್ದು, ಅವರ ಅಸಾಮರ್ಥ್ಯದಿಂದಾಗಿ ಇಂತಹ ಕೆಲವು ದೊಡ್ಡ ದಾಳಿಗಳು ನಡೆದಿವೆ" ಎನ್ನುತ್ತಾ ಅವರು ನಕ್ಸಲ್ ಸಮಸ್ಯೆಯನ್ನು ಈ ರೀತಿ ವ್ಯಾಖ್ಯಾನಿಸಿದರು.

ಇದೇ ಕಾರ್ಯಕ್ರಮದಲ್ಲಿ ಶನಿವಾರ ನಕ್ಸಲ್ ಪಿಡುಗು ಬಗ್ಗೆ ಮಾತನಾಡಿದ ಗೃಹಸಚಿವರು, "ಕೆಲವು ಬಾರಿ ದೇಶದ 10 ರಾಜ್ಯಗಳು ಅಂದರೆ ಸುಮಾರು 180 ಜಿಲ್ಲೆಗಳು ನಕ್ಸಲ್ ಪಿಡುಗಿಗೊಳಗಾಗಿವೆ ಎನ್ನಲಾಗುತ್ತದೆ. ಅದರರ್ಥ ದೇಶದ ಮ‌ೂರನೇ ಒಂದು ಭಾಗ ತೊಂದರೆಗೊಳಗಾಗಿದೆ ಎಂದು. ಜಿಲ್ಲೆಯ ಒಂದು ಗ್ರಾಮ ಇದರಿಂದ ಬಳಲುತ್ತಿದ್ದರೂ ಇಡೀ ಜಿಲ್ಲೆ ತೊಂದರೆಗೊಳಗಾಗಿದೆ ಎಂದು ಗುರುತಿಸಲಾಗುತ್ತದೆ. ರಾಜ್ಯದ ಒಂದು ಅಥವಾ ಎರಡು ಜಿಲ್ಲೆಗಳಿಗೆ ಇಂತಹ ಸಮಸ್ಯೆ ಬಾಧಿಸುತ್ತಿದ್ದರೆ ಅದನ್ನು ಇಡೀ ರಾಜ್ಯಕ್ಕೆ ಎಂದು ಅರ್ಥೈಸಿಕೊಳ್ಳಬೇಕಾಗಿಲ್ಲ" ಎಂದು ಹೇಳಿದ್ದರು.

"ನೀವು ಮಾಧ್ಯಮ ಮತ್ತು ಜನರ ಸಹಕಾರ ಪಡೆದುಕೊಳ್ಳಬೇಕು. ನಾಗರಿಕ ಸಮಾಜದಿಂದ ನಂಬಿಕೆಯನ್ನು ಗಳಿಸಿಕೊಳ್ಳಬೇಕು. ಮಾಧ್ಯಮಗಳ ಜತೆ ನೀವು ನಿಕಟ ಸಂಬಂಧ ಹೊಂದಿರಬೇಕು" ಎಂದು ಪ್ರಧಾನಿ ಹೇಳಿದ್ದರೆ, ಅವರ ಹೇಳಿಕೆಗೆ ವ್ಯತಿರಿಕ್ತವಾಗಿ ಗೃಹಸಚಿವರು, "ಸುಲಭದ ಪರಿಹಾರವೆಂದರೆ ತನಿಖೆ ಮುಗಿಯುವವರೆಗೆ ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡದಿರುವುದು. ನಾವು ಕೆಲವು ಸಲ ಏನೋ ಮಾಡಿದ ಅತ್ಯುತ್ಸಾಹದಲ್ಲಿರುತ್ತೇವೆ ಮತ್ತು ಅದರಿಂದಲೇ ಸಮಸ್ಯೆ ಸೃಷ್ಟಿಯಾಗುತ್ತದೆ" ಎಂದು ಹೇಳಿದ್ದರು.

ಇದಕ್ಕೂ ಮೊದಲು ಮಾತನಾಡಿದ ಮಹಾರಾಷ್ಟ್ರ ಪೊಲೀಸ್ ಮುಖ್ಯಸ್ಥ ಎ.ಎನ್. ರಾಯ್, "ಮಾಧ್ಯಮದವರು ಮಾಲೆಗಾಂವ್ ಪ್ರಕರಣದಲ್ಲಿ ಮ‌ೂಗು ತೂರಿಸುತ್ತಿದ್ದಾರೆ. ಸಾವಿರ ಪ್ರಶ್ನೆಗಳನ್ನು ಕೇಳುತ್ತಾರೆ. ಒಂದು ವೇಳೆ ಪೊಲೀಸರು ಮೌನ ವಹಿಸಿದರೆ, ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತಾರೆ" ಎಂದಿದ್ದಕ್ಕೆ ಸಚಿವ ಪಾಟೀಲ್ ಈ ರೀತಿ ಪ್ರತಿಕ್ರಿಯೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಫ್ಘನ್ ಎಫೆಕ್ಟ್: ಭಾರತದ ಮೇಲೆ ಖಾಯಿದಾ ಕರಿನೆರಳು
ಮಣಿಪುರ್:ಸೇನಾಪಡೆಗಳಿಂದ ಉಗ್ರರ ಹತ್ಯೆ
ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುಪ್ತಚರ ದಳ ಬಲಪಡಿಸಿ:ಪ್ರಧಾನಿ
ಚುನಾವಣಾ ಪೂರ್ವ ಹೊಂದಾಣಿಕೆ ಅಗತ್ಯ: ಸಿಪಿಐ
ರಾಹುಲ್‌‌ರಾಜ್ ಶೂಟೌಟ್‌‌ ಪ್ರಕರಣಕ್ಕೆ 'ಯು ಟರ್ನ್'
ಪೋಟಾದಂತಹ ಕಾನೂನು ಇಲ್ಲ: ಕೇಂದ್ರ ಸ್ಪಷ್ಟನೆ