ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳ ಮೇಲೆ ಮೋಕಾ ಕಾಯ್ದೆ ಪ್ರಯೋಗಿಸಿರುವುದನ್ನು ವಿರೋಧಿಸಿರುವ ಬಿಜೆಪಿ ಈ ಸಂಬಂಧ ಕೇಂದ್ರವನ್ನುಟೀಕಿಸಿದ್ದು, ಪ್ರಬಲ ಉಗ್ರವಿರೋಧಿ ಕಾಯ್ದೆ ಬಳಸುವಲ್ಲಿ ಯುಪಿಎ ಸರಕಾರ ಧಾರ್ಮಿಕ ತಾರತಮ್ಯ ನೀತಿ ಅನುಸರಿಸಿದೆ ಎಂದು ಆರೋಪಿಸಿದೆ.
ಮಾಲೆಗಾಂವ್ ಸ್ಫೋಟ ಆರೋಪಿಗಳನ್ನು ಮೋಕಾ (ಎಂ.ಸಿ.ಓ.ಸಿ.ಎ.- ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ)ದಡಿಗೆ ತಂದಿರುವುದನ್ನು ಬಿಜೆಪಿ ವಿರೋಧಿಸಿದ್ದು, "ಸೆಪ್ಟೆಂಬರಿನಲ್ಲಿ ನಡೆದ ದೆಹಲಿ ಸರಣಿ ಸ್ಫೋಟದ ತನಿಖೆಯಲ್ಲಿನ ಪ್ರಗತಿ ಬಗ್ಗೆ ಬಿಜೆಪಿ ಮಾಹಿತಿ ಬಯಸುತ್ತಿದೆ. ಇದೇ ಪ್ರಕರಣದಲ್ಲಿ ಬಾಟ್ಲಾ ಹೌಸ್ ಎನ್‌ಕೌಂಟರ್ ಕೂಡ ನಡೆದಿತ್ತು. ಈ ಪ್ರಕರಣದಲ್ಲಿ ಸರಕಾರವೇಕೆ ಮೌನ ವಹಿಸುತ್ತಿದೆ? 2002ರ ದೆಹಲಿ ಸ್ಫೋಟ ಪ್ರಕರಣದಲ್ಲಿ ಮೋಕಾ ಅಳವಡಿಸಬಹುದಾದರೆ ಸೆಪ್ಟೆಂಬರ್ ದೆಹಲಿ ಸರಣಿ ಸ್ಫೋಟ ಆರೋಪಿಗಳಿಗೆ ಯಾಕೆ ಬೇಡ?" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ ಪ್ರಶ್ನಿಸಿದ್ದಾರೆ.
ಮಾಲೆಗಾಂವ್ ಸ್ಫೋಟ ಆರೋಪಿಗಳಾದ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪಿ.ಎಸ್. ಪುರೋಹಿತ್ ಮತ್ತಿತರರ ಮೇಲೆ ಯಾವ ಧರ್ಮದವರು ಎಂದು ತಿಳಿದ ಮೇಲೆ ಕಟುವಾದ ಕಾಯ್ದೆ ಮೋಕಾ ಪ್ರಯೋಗಿಸಲಾಗಿದೆ ಎಂಬುದು ಬಿಜೆಪಿಯ ಹಿರಿಯ ಮುಖಂಡರ ಆರೋಪ.
"ಪ್ರಕರಣದ ಗುಣಲಕ್ಷಣ- ತೀವ್ರತೆ ಬದಲಿಗೆ ಧರ್ಮದ ಆಧಾರದ ಮೇಲೆ ಆರೋಪಿಗಳಿಗೆ ಮೋಕಾ ಹೇರಲಾಗಿದೆ" ಎಂದು ಜೇಟ್ಲಿ ಹೇಳಿದ್ದಾರೆ. ಸಾಮಾನ್ಯ ಅಪರಾಧ ಪ್ರಕರಣಗಳಿಗೂ ದೆಹಲಿ ಪೊಲೀಸರು ಮೋಕಾ ಪ್ರಯೋಗಿಸಿರುವ ಸಾಕಷ್ಟು ಉದಾಹರಣೆಗಳಿವೆ ಎಂದು ಇದೇ ಸಂದರ್ಭದಲ್ಲಿ ಕೇಸರಿ ಪಕ್ಷದ ನಾಯಕ ಪ್ರತಿಪಾದಿಸಿದರು.
"ಸರಣಿ ಸ್ಫೋಟ ಆರೋಪಿಗಳಿಗೆ ದೆಹಲಿ ಪೊಲೀಸರು ಮೋಕಾ ಪ್ರಯೋಗ ಮಾಡದಂತೆ ಸರಕಾರ ತಡೆಯಲು ಕಾರಣಗಳೇನು?" ಎಂದು ಜೇಟ್ಲಿ ಇದೇ ಸಂದರ್ಭದಲ್ಲಿ ಯುಪಿಎ ಸರಕಾರವನ್ನು ಪ್ರಶ್ನಿಸಿದ್ದಾರೆ. |