ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಅವರು ಅಭಿನವ್ ಭಾರತಕ್ಕೆ ಧನಸಹಾಯ ನೀಡಿರುವುದಾಗಿ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಕರ್ನಲ್ ಶ್ರೀಕಾಂತ್ ಪ್ರಕಾಶ್ ಪುರೋಹಿತ್ ಗಂಭೀರವಾಗಿ ಆರೋಪ ಮಾಡುವ ಮೂಲಕ ಪ್ರಕರಣ ಮತ್ತೊಂದು ತಿರುವು ಪಡೆದಿದೆ.
ಸೆಪ್ಟೆಂಬರ್ 29ರಂದು ಮಾಲೆಗಾಂವ್‌ನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿನವ್ ಭಾರತದ ಸದಸ್ಯರನ್ನು ಎಟಿಎಸ್ ಅಧಿಕಾರಿಗಳು ತೀವ್ರ ತನಿಖೆಗೆ ಒಳಪಡಿಸಿದ್ದಾರೆ. ಈ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದರು.
ಇದೀಗ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿರುವ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್, ಅಭಿನವ್ ಭಾರತ್ ಸಂಘಟನೆಗೆ ಫೈಯರ್ ಬ್ರ್ಯಾಂಡ್ ಖ್ಯಾತಿಯ ಪ್ರವೀಣ್ ತೊಗಾಡಿಯಾ ಅವರು ಆರ್ಥಿಕ ನೆರವು ನೀಡಿರುವುದಾಗಿ ಆರೋಪಿಸಿದ್ದಾರೆ.
ಪ್ರಕರಣದ ಕುರಿತು ಸಿಬಿಐ ತನಿಖೆಯಲ್ಲಿ ಪುರೋಹಿತ್ ಈ ಆರೋಪ ಬಹಿರಂಗಗೊಂಡಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ತೊಗಾಡಿಯಾ ನಿರಾಕರಣೆ: ಅಭಿನವ್ ಭಾರತ ಸಂಘಟನೆಗೆ ಧನಸಹಾಯ ನೀಡಿರುವುದಾಗಿ ಪುರೋಹಿತ್ ಆರೋಪವನ್ನು ತೊಗಾಡಿಯಾ ಅವರು ತಳ್ಳಿಹಾಕಿದ್ದು, ಇದೊಂದು ಆಧಾರರಹಿತ ಆರೋಪವಾಗಿದ್ದು, ಇದು ರಾಜಕೀಯ ಪ್ರೇರಿತವಾದುದು ಎಂದು ದೂರಿದ್ದಾರೆ. |