ಕಾಂಗ್ರೆಸ್ "ಹಿಂದೂ ಉಗ್ರವಾದ"ವನ್ನು ವೈಭವೀಕರಣಗೊಳಿಸುತ್ತಿರುವುದನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ, ಬಿಜೆಪಿಯು ಇದನ್ನು ಚುನಾವಣಾ ವಿಷಯವನ್ನಾಗಿ ಮಾಡಲಿದೆ ಎಂದು ಹೇಳಿದ್ದಾರೆ.
"ಬಿಜೆಪಿ ಎಂದಿಗೂ ಯಾವುದೇ ಧರ್ಮದ ಉಗ್ರವಾದದ ಜತೆಗೂ ಕೈ ಜೋಡಿಸಿಲ್ಲ. ಕಾಂಗ್ರೆಸ್ಸಿಗೆ ಚರ್ಚೆಗೆ ಬೇರೆ ವಿಷಯವಿಲ್ಲದ ಕಾರಣ ವಿವಾದ ಮಾಡಲು ಯತ್ನಿಸುತ್ತಿದೆ" ಎಂದು ಚುನಾವಣಾ ರ‌್ಯಾಲಿಯೊಂದನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
"ಭಯೋತ್ಪಾದಕರು ದೇಶದ್ರೋಹಿಗಳು. ಯಾವುದೇ ಕಾರಣಕ್ಕೂ ರಕ್ಷಿಸಬಾರದು. ಅವರನ್ನು ಯಾವುದೇ ಧರ್ಮದವರು ಎಂದು ಗುರುತಿಸಿ ಹೇಳುವುದು ಸರಿಯಲ್ಲ" ಎಂದು ಅಡ್ವಾಣಿ ಹೇಳಿದರು.
ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಿಂದ ಬಂಧಿತರಾಗಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹಿಂಸೆ ಅನುಭವಿಸುತ್ತಿದ್ದಾರೆ ಎಂದ ಅಡ್ವಾಣಿ, "ನಾಸಿಕ್ ನ್ಯಾಯಾಲಯಕ್ಕೆ ಆಕೆ ಸಲ್ಲಿಸಿದ್ದ ಮನವಿಯನ್ನು ನಾನು ನೋಡಿದ್ದೇನೆ. ಈ ದೇಶದಲ್ಲಿ ಒಬ್ಬ ಸಾಧ್ವಿಗೆ ಈ ರೀತಿ ಚಿತ್ರಹಿಂಸೆ ಕೊಡಲಾಗುತ್ತಿರುವುದನ್ನು ಕಂಡು ನನಗೆ ಆಶ್ಚರ್ಯವಾಯಿತು" ಎಂದಿದ್ದಾರೆ.
ನವೆಂಬರ್ 27ರಂದು ಚುನಾವಣೆ ನಡೆಯಲಿರುವ ಮಧ್ಯಪ್ರದೇಶದ ಇಂದೋರಿನಲ್ಲಿ ಚುನಾವಣಾ ರ‌್ಯಾಲಿಯಲ್ಲಿ ಯಾರನ್ನೂ ಹೆಸರಿಸದೆ ಕಾಂಗ್ರೆಸ್ಸನ್ನು ಕಟುವಾಗಿ ಟೀಕಿಸಿದ ಅವರು, "ಕಾಂಗ್ರೆಸ್ ನಾಯಕರಿಲ್ಲದೆ ಆಟವಾಡುತ್ತಿದೆ. ಮಧ್ಯಪ್ರದೇಶ, ರಾಜಸ್ತಾನ ಮತ್ತು ಚತ್ತೀಸ್‌ಗಢಗಳ ಮೂರೂ ಪಂದ್ಯಗಳಿಗೆ ನಾಯಕನನ್ನು ಹೆಸರಿಸದೆ ಕಾಂಗ್ರೆಸ್ ತಂಡ ವಿಫಲಗೊಂಡಿದೆ" ಎಂದು ವ್ಯಂಗ್ಯವಾಡಿದರು.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್‌ರನ್ನು ಹೊಗಳಿದ ಅಡ್ವಾಣಿ, ಅವರು ರಾಜ್ಯದಲ್ಲಿ ಅಭಿವೃದ್ಧಿ ಪರವಾಗಿದ್ದಾರೆ. ಅಧಿಕಾರ ನಮ್ಮ ಕೈಗೆ ಬರುವುದು ಖಚಿತ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. |