ವಿಶ್ವದ ಕಣ್ಣಿನಲ್ಲಿ ಭಾರತವನ್ನು 'ಹಿಂದೂ ಉಗ್ರವಾದಿ ರಾಷ್ಟ್ರ' ಎಂದು ಕಾಂಗ್ರೆಸ್ ಬಿಂಬಿಸಿದೆ ಎಂದು ಬಿಜೆಪಿ ಸೋಮವಾರ ಆರೋಪಿಸಿದೆ. ಜತೆಗೆ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಕಾಂಗ್ರೆಸ್ಸಿನ 'ಒಡೆದು ಆಳುವ ನೀತಿ'ಯನ್ನು ತಾನು ಚುನಾವಣಾ ವಿಷಯವನ್ನಾಗಿ ಮಾಡುವುದಾಗಿ ಕೂಡ ಹೇಳಿಕೊಂಡಿದೆ.
"ಹಿಂದೂ ಉಗ್ರವಾದ ಎಂಬ ಪೊಳ್ಳುತನವನ್ನು ಸೃಷ್ಟಿಸುವ ಮೂಲಕ ಅಥವಾ ಅಲ್ಪಸಂಖ್ಯಾತರನ್ನು ತುಷ್ಟೀಕರಣಗೊಳಿಸುವ ಮೂಲಕ ಕಾಂಗ್ರೆಸ್ ಸಮಾಜವನ್ನು ಒಡೆದು ಆಳುವ ನೀತಿಗೆ ಯತ್ನಿಸುತ್ತಿದೆ. ಕಾಂಗ್ರೆಸ್ ಯಾವತ್ತೂ ಸಮಾಜವನ್ನು ಒಡೆದು ಆಳುತ್ತದೆ" ಎಂದು ಬಿಜೆಪಿ ಉಪಾಧ್ಯಕ್ಷ ಮುಕ್ತಾರ್ ಅಬ್ಬಾಸ್ ನಖ್ವಿ ಜೈಪುರದಲ್ಲಿ ಇಂದು ಪತ್ರಿಕಾಗೋಷ್ಟಿ ಉದ್ದೇಶಿಸಿ ಹೇಳಿದರು.
"ಈಗ ಕಾಂಗ್ರೆಸ್ ತಂತ್ರಗಳು ಬಹಿರಂಗಗೊಂಡಿವೆ. ಅದು ಧರ್ಮದ ಆಧಾರದಲ್ಲಿ ಸಮಾಜವನ್ನು ಬೇರ್ಪಡಿಸುವ ಪಾಪದ ಕೃತ್ಯವನ್ನು ಮತ್ತೆ ಮತ್ತೆ ಮಾಡುತ್ತಿದೆ. ರಾಜಸ್ತಾನದಲ್ಲಿ ನಡೆಯಲಿರುವ ಡಿಸೆಂಬರ್ 4ರ ಚುನಾವಣೆ ಸೇರಿದಂತೆ ಇತರ ವಿಧಾನಸಭಾ ಚುನಾವಣೆಗಳಲ್ಲಿ ಇದಕ್ಕೆ ತಕ್ಕ ಶಾಸ್ತಿಯಾಗಲಿದೆ" ಎಂದು ಅವರು ಕಾಂಗ್ರೆಸ್ಸಿಗೆ ಎಚ್ಚರಿಕೆ ನೀಡಿದರು.
"ಜಗತ್ತಿನ ಕಣ್ಣಿನಲ್ಲಿ ಭಾರತವನ್ನು ಹಿಂದೂ ಉಗ್ರವಾದಿಗಳ ದೇಶವನ್ನಾಗಿ ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಬೆಂಬಲಿಸಿದ್ದು, ಲಷ್ಕರ್ ಈ ತೋಯ್ಬಾ ಸೇರಿದಂತೆ ಇತರ ಸಂಘಟನೆಗಳಿಗೆ ಆಶ್ರಯ ಹಾಗೂ ಪ್ರೋತ್ಸಾಹವನ್ನು ನೀಡಿದೆ" ಎಂದೂ ನಖ್ವಿ ಆಪಾದಿಸಿದರು.
"ಕಾಂಗ್ರೆಸ್ ಹಿಂದೂಗಳ ವಿರುದ್ಧ ಪಿತೂರಿ ನಡೆಸುತ್ತಿದೆ. ಅವರದೇ ಪಾಪಗಳನ್ನು ಬಯಲಿಗೆಳೆಯಲು ನಾರ್ಕೋ ಪರೀಕ್ಷೆಗೆ ಕೂಡ ಕಾಂಗ್ರೆಸ್ ವ್ಯಕ್ತಿಯನ್ನೇ ನೇಮಿಸಲಾಗಿತ್ತು" ಎಂದೂ ಅವರು ಮಾಲೆಗಾಂವ್ ಪ್ರಕರಣದ ಬಗ್ಗೆ ಕಾಂಗ್ರೆಸ್ಸನ್ನು ದೂಷಿಸಿದರು.
ರಾಜಸ್ತಾನ, ಚತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ವಿಜಯ ಸಾಧಿಸುವ ಭರವಸೆಯಿಂದಿರುವ ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಗಿದು ಮೆಟ್ಟಿಲಾಗಲಿದೆ ಎಂಬ ನಂಬಿಕೆಯಿಂದಿದೆ.
|