ಅಭಿನವ್ ಭಾರತ ಸಂಸ್ಥೆಗೆ ವಿಶ್ವಹಿಂದೂ ಪರಿಷತ್‌ನ ಪ್ರವೀಣ್ ತೊಗಾಡಿಯಾ ಅವರು ಆರ್ಥಿಕ ಸಹಾಯ ನೀಡಿದ್ದಾರೆಂಬ ವರದಿಯನ್ನು ಸಿಬಿಐ ಸೋಮವಾರ ತಳ್ಳಿಹಾಕಿದೆ.
ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ತೊಗಾಡಿಯಾ ಅವರು ಕೂಡ ಭಾಗಿ ಎಂಬ ಅಂಶ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಅಂಶ ಸತ್ಯವಲ್ಲ. ಸಿಬಿಐ ಯಾವುದೇ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಸಿಬಿಐ ವಕ್ತಾರ ಹರ್ಷ್ ಬೆಹ್ಲ ಅವರು ಸ್ಪಷ್ಟಪಡಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಅವರು ಅಭಿನವ್ ಭಾರತಕ್ಕೆ ಧನಸಹಾಯ ನೀಡಿರುವುದಾಗಿ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಕರ್ನಲ್ ಶ್ರೀಕಾಂತ್ ಪ್ರಕಾಶ್ ಪುರೋಹಿತ್ ಗಂಭೀರವಾಗಿ ಆರೋಪ ಮಾಡಿರುವುದಾಗಿ ವರದಿಯಾಗಿತ್ತು.
ಮಾಲೆಗಾಂವ್ ಸ್ಫೋಟ ಪ್ರಕರಣದ ಕುರಿತಾಗಿ ಸಿಬಿಐ ಕೇಂದ್ರ ಸರಕಾರಕ್ಕೆ ಯಾವುದೇ ವರದಿಯನ್ನೂ ಸಲ್ಲಿಸಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಅಭಿನವ್ ಭಾರತ ಜೊತೆಗಿನ ಸಂಪರ್ಕದ ಆರೋಪವನ್ನು ಪ್ರವೀಣ್ ತೊಗಾಡಿಯೂ ಕೂಡ ನಿರಾಕರಿಸಿದ್ದರು. ಇದೊಂದು ವ್ಯವಸ್ಥಿತವಾದ ಸಂಚಿನ ಹಾಗೂ ರಾಜಕೀಯ ಪ್ರೇರಿತವಾದ ಆರೋಪವಾಗಿದೆ ಎಂದು ದೂರಿದ್ದರು. |