ಅಪಹರಣಗೊಂಡು ಎರಡು ತಿಂಗಳುಗಳಿಂದ ಸೋಮಾಲಿಯಾ ಉಗ್ರರ ವಶದಲ್ಲಿದ್ದ 'ಸ್ಟಾಲ್ಟ್ ವೇಲರ್' ಹಡಗಿನಲ್ಲಿ ಒತ್ತೆಯಾಳುಗಳಾಗಿದ್ದ ಹಡಗಿನ ಕಾಪ್ಟನ್ ಪ್ರಭಾತ್ ಗೋಯಲ್ ಮತ್ತು ಇತರ ಸಿಬ್ಬಂದಿಗಳು ಮಂಗಳವಾರ ಮುಂಜಾನೆ ತವರಿಗೆ ಮರಳಿದ್ದಾರೆ.
ಐವರು ಭಾರತೀಯ ಸಿಬ್ಬಂದಿ ಸೋಮವಾರ ಬೆಳಿಗ್ಗೆ ಮುಂಬೈ ತಲುಪಿದ್ದರು. ಸೆಪ್ಟೆಂಬರ್ ಅಂತ್ಯದಲ್ಲಿ ಸೋಮಾಲಿಯಾ ಸಮುದ್ರ ಪ್ರದೇಶದಿಂದ ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ ಹಡಗಿನಲ್ಲಿ 18 ಮಂದಿ ಭಾರತೀಯ ಸಿಬಂದಿ ಒತ್ತೆಯಾಳುಗಳಾಗಿದ್ದರು. ಸುಮಾರು 23,818 ಟನ್ ಪೆಟ್ರೋಲಿಯಂ ಉತ್ಪನ್ನಗಳನ್ನು ಈ ಕಾರ್ಗೋ ಶಿಪ್ ಸಾಗಿಸುತ್ತಿತ್ತು.
"ನಾನು ಮಾಧ್ಯಮಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾವು ಬಹಳ ಕಷ್ಟ ಅನುಭವಿಸಿದೆವು, ಪ್ರಸ್ತುತ ನನ್ನಿಂದ ನಡೆಯುವುದು ಸಹ ಸಾಧ್ಯವಿಲ್ಲ. ನಾವು 11 ಜನ ಇಲ್ಲಿ ತಲುಪಿದ್ದೇವೆ ಮತ್ತು ಉಳಿದವರು ಈಗಾಗಲೇ ಮುಂಬಯಿ ತಲುಪಿದ್ದಾರೆ" ಎಂದು ದೆಹಲಿ ತಲುಪಿದ ನಂತರ ಗೋಯಲ್ ಹೇಳಿದರು. |