ವಿವಾಹ ವಿಚ್ಛೇದನ ಪಡೆಯಲು ಪತಿ ಮನೆಯವರು ಸಮಾಜದ ಹಿರಿಯರ ಕ್ಷಮೆಯಾಚನೆ ಮಾಡಬೇಕು ಮತ್ತು 40 ಲಕ್ಷ ರೂಪಾಯಿ ಪರಿಹಾರ ಕೊಡಬೇಕೆಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಈ ತೀರ್ಪಿನೊಂದಿಗೆ, ಸುದೀರ್ಘಾವಧಿಯಿಂದ ನಡೆಯುತ್ತಿದ್ದ ವಿವಾಹ ವಿಚ್ಛೇದನ ಪ್ರಕ್ರಿಯೆಯೊಂದು ಅಂತ್ಯ ಕಾಣಲಿದೆ. ಹಲವು ವರ್ಷಗಳಿಂದ ಎರಡೂ ಕಡೆಯವರು ಪರಸ್ಪರ ಈ ಸಂಬಂಧ ಹಲವು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದರು.
ದೆಹಲಿಯಲ್ಲಿ ಸೆಪ್ಟೆಂಬರ್ ಆರರಂದು ನಡೆದ ಲೋಕ ಅದಾಲತ್‌ನಲ್ಲಿ ಅಭಿನವ್ ಮತ್ತು ಶಿಲ್ಪಾ ದಂಪತಿ ತಮ್ಮ 'ಯುದ್ಧ' ಕೊನೆಗಾಣಿಸಲು ನಿರ್ಧರಿಸಿದರು. ಅದರ ಪ್ರಕಾರ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಅರಿಜಿತ್ ಪಸಾಯತ್ ಮತ್ತು ಮುಕುಂದಮ್ ಶರ್ಮಾ ಅವರ ಪೀಠ ಈ ಸಂಬಂಧ ಆದೇಶವನ್ನು ಹೊರಡಿಸಿದೆ.
ಪರಿಹಾರದ ಹಣ ಕೊಡುವುದಲ್ಲದೆ, ಅಭಿನವ್ ಮತ್ತವರ ಕುಟುಂಬ ಸಮಾಜದ ಹಿರಿಯರ ಬಳಿ ಕ್ಷಮೆ ಕೇಳಬೇಕೆಂದು ಶ್ರೇಷ್ಠ ನ್ಯಾಯಾಲಯವು ಆದೇಶ ನೀಡಿದೆ. ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ವಾದಿ-ಪ್ರತಿವಾದಿಗಳು ಲೋಕ ಅದಾಲತ್‌ನಲ್ಲಿ ರಾಜಿ ಪಂಚಾಯಿತಿ ಮೂಲಕ ಪ್ರಕರಣವನ್ನು ಮುಗಿಸಲೆತ್ನಿಸಿದರೆ ನ್ಯಾಯಾಲಯ ಅದಕ್ಕೆ ಅನುಮತಿ ನೀಡುತ್ತದೆ. ಈ ದಂಪತಿಗೆ ಸಂಬಂಧಿಸಿ ಸಂಧಾನ ಪ್ರಕ್ರಿಯೆಯ ಮಾತುಕತೆಯಂತೆ ಅಭಿನವ್ ಮತ್ತು ಅವರ ತಂದೆ ಅಶೋಕ್ ಗುಪ್ತಾರವರು ಎರಡು ತಿಂಗಳೊಳಗೆ ಶಿಲ್ಪಾ ಅವರಿಗೆ ಡಿಡಿ ಸಂದಾಯ ಮಾಡಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ.
ಪರಸ್ಪರ ಮಾತುಕತೆಯ ಮೂಲಕ ವೈವಾಹಿಕ ಸಂಬಂಧವನ್ನು ಮುರಿದುಕೊಳ್ಳುವವರು ತಮ್ಮ ಮೇಲೆ ಪರಸ್ಪರ ಹಾಕಿಕೊಂಡಿದ್ದ ಕ್ರಿಮಿನಲ್ ಅಥವಾ ಯಾವುದೇ ಪ್ರಕರಣಗಳು ರದ್ದಾಗುತ್ತವೆ.
ಅಭಿನವ್ ಕುಟುಂಬದ ಏಳು ಮಂದಿ ಶಿಲ್ಪಾ ಕುಟುಂಬದಲ್ಲಿ ಕ್ಷಮೆ ಯಾಚಿಸಬೇಕಿದೆ. ಒಂದು ವೇಳೆ ನಿಗದಿತ ಸಮಯದಲ್ಲಿ ಅದು ನಡೆಯದಿದ್ದರೆ ಪ್ರಕರಣಕ್ಕೆ ಮತ್ತೆ ಜೀವ ಕೊಡುವ ಹಕ್ಕು ಶಿಲ್ಪಾರಿಗಿದೆ ಎಂದು ನ್ಯಾಯಾಲಯ ಹೇಳಿದೆ. |