ಭಾರತೀಯ ಜನತಾ ಪಕ್ಷದಲ್ಲಿ ಪ್ರತಿಭಾವಂತ ನಾಯಕರ ಕೊರತೆಯಿದ್ದುದರಿಂದ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಎಲ್.ಕೆ. ಅಡ್ವಾಣಿಯವರನ್ನು ಆರಿಸಿದೆ ಎಂದು ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಎನ್. ಗೋವಿಂದಾಚಾರ್ಯ ವ್ಯಂಗ್ಯವಾಡಿದ್ದಾರೆ.
ಗೋವಿಂದಾಚಾರ್ಯ ಪ್ರಕಾರ ಹಿಂದುತ್ವ ಮುನ್ನಡೆಸಲು ಅಡ್ವಾಣಿ ಯೋಗ್ಯ ನಾಯಕರಲ್ಲ. ಮತ್ತೂ ಮುಂದುವರಿದ ಅವರು, ಇಂದಿನ ಆರ್ಥಿಕ ಅವ್ಯವಸ್ಥೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೇ ಕಾರಣ ಎಂದು ಆರೋಪಿಸಿದ್ದಾರೆ.
"ಪಕ್ಷದಲ್ಲಿ ಅಡ್ವಾಣಿಯವರೇ ಉತ್ತಮರೆಂದು ಕಂಡುಬಂದಿರಬಹುದು. ಅವರ ಅಗತ್ಯ ದೇಶಕ್ಕಿಲ್ಲ. ಅಲ್ಲಿದ್ದವರೇ ಪೊಳ್ಳುವಾದಿಗಳಾಗಿರುವುದರಿಂದ ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷೆಯನ್ನು ಯಾರೂ ಮಾಡಲಾಗದು" ಎಂದು ಒಂದು ಕಾಲದ ಅಡ್ವಾಣಿಯವರ ಅಚ್ಚುಮೆಚ್ಚಿನವರಾಗಿದ್ದ ಗೋವಿಂದಾಚಾರ್ಯ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಗೋವಿಂದಾಚಾರ್ಯ 2000ದಲ್ಲಿ ಬಿಜೆಪಿಯಿಂದ ಹೊರ ನಡೆದಿದ್ದರು. ನಂತರ ಇತ್ತೀಚೆಗಷ್ಟೇ ರಾಜಕೀಯ ಮರುಪ್ರವೇಶ ಮಾಡಿ, ಉಮಾ ಭಾರತಿಯವರ 'ಭಾರತೀಯ ಜನ ಶಕ್ತಿ' ಪಕ್ಷದಲ್ಲಿ ಮಧ್ಯಪ್ರದೇಶ ಚುನಾವಣೆಗಾಗಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
"ಆಡ್ವಾಣಿಯವರು ಹಿಂದುತ್ವವನ್ನು ಮುನ್ನಡೆಸಲು ಯೋಗ್ಯ ನಾಯಕರಲ್ಲ. ಅವರೊಬ್ಬ ಬಲ ಪಂಥೀಯ ಹಾದಿಯ ಅಕ್ರಮ ನಾಯಕ. ಅವರ ನಿರ್ಧಾರಗಳು ಮತ್ತು ಯೋಚನಾ ಲಹರಿ ವಿಚಿತ್ರವಾಗಿವೆ. ಅವರಿಗೆ ಭಾರತವೆಂದರೆ ಚುನಾವಣಾ ವಿಚಾರ. ಆಡ್ವಾಣಿಯವರು ಯೂರೋಪ್ ಮತ್ತು ಪಾಶ್ಚಿಮಾತ್ಯ ದೇಶಗಳಿಂದ ಪ್ರಭಾವಕ್ಕೊಳಗಾಗಿದ್ದು, ಅವರಿಗೆ ಭೂಲಕ್ಷಣಗಳ ಬಗ್ಗೆ ಒಲವಿಲ್ಲ" ಎಂದು ಆರೋಪಿಸಿದ್ದಾರೆ.
"ಅವರಿಗೆ ಅಷ್ಟು ಧೈರ್ಯವಿದ್ದರೆ ಪಕ್ಷವನ್ನು ಒಡೆದು ಅವರ ದಾರಿಯನ್ನು ಸರಿದೂಗಿಸಿಕೊಂಡು ನೋಡಲಿ. ನಂತರ ಏನಾಗುತ್ತದೋ ನೋಡೋಣ. ನಿಮ್ಮ ನಿರ್ಧಾರಗಳನ್ನು ಧೈರ್ಯದಿಂದ ಹಿಂಬಾಲಿಸಿ ಮತ್ತು ಅದನ್ನು ಜನತೆಯತ್ತ ಒಯ್ಯಿರಿ ಎಂದು ಜಿನ್ನಾ ಪ್ರಕರಣದಲ್ಲಿ ಅವರಿಗೆ ಸಲಹೆ ನೀಡಿದ್ದೆ" ಎಂದು 2005ರ ಪಾಕಿಸ್ತಾನ ಭೇಟಿಯ ಸಂದರ್ಭದಲ್ಲಿ ಮಹಮ್ಮದ್ ಆಲಿ ಜಿನ್ನಾ ಪ್ರಕರಣವನ್ನು ಮತ್ತೆ ಕೆದಕಿದರು.
"ವಾಜಪೇಯಿ ಇಂದು ಅಪ್ರಸ್ತುತ. ತನ್ನ ಅಧಿಕಾರ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಲು ತಯಾರಾಗಿದ್ದವರವರು. ಪೋಖ್ರಾನ್ ಹೊರತು ಪಡಿಸಿ ಅವರೇನು ಸಾಧನೆ ಮಾಡಿದ್ದಾರೆ? ಅಲ್ಲಿ ಮಾತ್ರ ತನ್ನ ಧೈರ್ಯವನ್ನು ತೋರಿಸಿದ್ದರು. ನಂತರ ಕಾರ್ಗಿಲ್ ಆಗಿರಲಿ ಅಥಾವ ಬೇರೆಲ್ಲೂ ಕೂಡ ಉತ್ತಮರಾಗಿರಲಿಲ್ಲ. ವಿದೇಶೀ ಹೂಡಿಕೆದಾರರಿಗೆ ಪೂರ್ಣಕುಂಭ ಸ್ವಾಗತ ನೀಡಿದ್ದು ಒಳ್ಳೆಯ ಕೆಲಸವೇ? ಇಂದಿನ ಆರ್ಥಿಕ ಸಂಕಷ್ಟಕ್ಕೆ ವಾಜಪೇಯಿ ಕೂಡ ಕಾರಣರಾಗಿದ್ದಾರೆ. ಜತೆಗೆ ನಿರುದ್ಯೋಗ ಸಮಸ್ಯೆ, ಅಸಮಾನತೆ ಮತ್ತು ಸರಕು ಸಂಸ್ಕೃತಿಗೆ ಅವರೇ ಕಾರಣರು" ಎಂದು ಗೋವಿಂದಾಚಾರ್ಯ ಆರೋಪಿಸಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿಗಿರುವ ವ್ಯತ್ಯಾಸಗಳನ್ನು ತನ್ನದೇ ಪದಗಳಲ್ಲಿ ವರ್ಣಿಸಿದ ಆಚಾರ್ಯ, "ನನ್ನ ಪ್ರಕಾರ ಕಾಂಗ್ರೆಸ್ 'ಮೂರು ಬಣ್ಣ'ದ ಪಕ್ಷ ಹಾಗೂ ಬಿಜೆಪಿ 'ಎರಡು ಬಣ್ಣ'ದ ಕಾಂಗ್ರೆಸ್. ಎರಡಕ್ಕೂ ಅಂತಹ ವ್ಯತ್ಯಾಸವೇನಿಲ್ಲ" ಎಂದು ಕೇಸರಿ ಪಕ್ಷವನ್ನು ವ್ಯಂಗ್ಯವಾಡಿದ್ದಾರೆ.
ಆರೆಸ್ಸೆಸ್ ಸ್ವಯಂ ಸೇವಕನಾಗಿ ಮುಂದುವರಿಯುವುದಾಗಿ ಹೇಳಿದ ಗೋವಿಂದಾಚಾರ್ಯರಲ್ಲಿ, ನಿಮ್ಮ ಕೆಲಸ ಕಾರ್ಯಗಳಿಗೆ ಸಂಘ ಪರಿವಾರದ ಬೆಂಬಲವಿದೆಯೇ ಎಂಬ ಪ್ರಶ್ನೆಗೆ ಅವರು, "ನನಗೆ ಗೊತ್ತಿಲ್ಲ. ನಾನು ಆ ಬಗ್ಗೆ ಕೇಳಿಲ್ಲ. ಆದರೆ ನಾನೇನು ಮಾಡುತ್ತೇನೋ ಅದರ ಬಗ್ಗೆ ಯಾವತ್ತೂ ಮಾಹಿತಿ ನೀಡುತ್ತಿರುತ್ತೇನೆ" ಎಂದರು.
ಸೆಪ್ಟೆಂಬರ್ 29 ಮಾಲೆಗಾಂವ್ ಸ್ಫೋಟದ ಬಗ್ಗೆ ಸಂಘ ಪರಿವಾರದ ಕೈವಾಡವನ್ನು ಪ್ರಶ್ನಿಸಿದಾಗ ಗೋವಿಂದಾಚಾರ್ಯ, "ಸಂಘ ಇದರಲ್ಲಿ ಪಾಲ್ಗೊಂಡಿದೆಯೇ ಎಂಬ ಪ್ರಶ್ನೆಯೇ ಬರುವುದಿಲ್ಲ. ಇದು ಅಮೆರಿಕಾ ಇರಾಕ್ ಮೇಲೆ ದಾಳಿ ಮಾಡಲು ಕಾರಣ ಹುಡುಕಿದಂತೆ. ಇರಾಕ್ ಬಳಿ ಸಮೂಹ ನಾಶಕ ಅಸ್ತ್ರಗಳಿವೆ ಎಂದು ಹೇಳುತ್ತಾ ಅಮೆರಿಕಾ ದಾಳಿ ಮಾಡಿತು. ಆದರೆ ಅಂತಹಾ ಯಾವುದೇ ಶಸ್ತ್ರಾಸ್ತ್ರಗಳು ಆ ದೇಶದಲ್ಲಿ ಸಿಗಲೇ ಇಲ್ಲ. ಹಾಗೆ ನಾವು ಕೂಡ ಬೆಂಕಿಯ ಜತೆ ಆಟವಾಡುತ್ತಿದ್ದೇವೆ. ಅದು ದೇಶದ ಬದ್ಧತೆಗಾಗಿ" ಎಂದು ಪರಿವಾರದ ಬೆಂಬಲಕ್ಕೆ ನಿಂತರು.
ಒಬ್ಬ ಹಿಂದೂ ಉಗ್ರಗಾಮಿಯಾಗಲು ಸಾಧ್ಯವೇ ಇಲ್ಲ ಎಂಬ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಹೇಳಿಕೆಯನ್ನು ಸಮರ್ಥಿಸುತ್ತಾ ಅವರು, "ಒಂದು ಬಿಳಿ ಕಾಗೆ ಅಥವಾ ಕಪ್ಪು ಹಂಸ - ಇದು ಹೊಂದಿಕೆಯಾಗುವುದೇ ಇಲ್ಲ. ಈ ಪ್ರಕರಣ ಸಂಪೂರ್ಣವಾಗಿ ಭಿನ್ನತೆಯನ್ನು ಹೊಂದಿದೆ. ಇಡೀ ಹಿಂದೂ ಸಮಾಜ ಅಸಹಿಷ್ಣುತೆ ನಂಬಿಕೆಗೆ ವಿರುದ್ಧವಾಗಿದೆ" ಎಂದು ಹೇಳಿದರು. |