ಛತ್ತೀಸ್‌ಗಢದ ಬಸ್ಟಾರ್ ಜಿಲ್ಲೆಯಲ್ಲಿ ಮಂಗಳವಾರ ಶಂಕಿತ ಮಾವೋವಾದಿಗಳು ಸೇತುವೆಯನ್ನು ಸ್ಫೋಟಿಸಿದ ಪರಿಣಾಮ ಕನಿಷ್ಠ ಏಳು ಮಂದಿ ಪೊಲೀಸ್ ಸಿಬಂದಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಛತ್ತೀಸ್‌ಗಢ ರಾಜಧಾನಿ ರಾಯ್‌ಪುರದಿಂದ ದಕ್ಷಿಣಕ್ಕೆ ಸುಮಾರು 188 ಮೈಲು ದೂರದಲ್ಲಿರುವ ಬಸ್ಟಾರ್ ಜಿಲ್ಲೆ ಮಾವೋವಾದಿಗಳ ಪ್ರಮುಖ ತಾಣವಾಗಿದ್ದು, ಘಟನೆ ಇಲ್ಲಿನ ಜಗದಾಳಪುರ ಎಂಬಲ್ಲಿ ಸಂಭವಿಸಿದೆ.
ಪೊಲೀಸರು ಜಗದಾಳಪುರ ಸಮೀಪದ ಸೇತುವೆಯನ್ನು ದಾಟುತ್ತಿದ್ದಾಗ ಭೂಮಿಯಲ್ಲಿ ಹುದುಗಿಸಿಡಲಾಗಿದ್ದ ಸ್ಫೋಟಕಗಳು ಸಿಡಿದ ಪರಿಣಾಮ ದುರ್ಘಟನೆ ನಡೆದಿದೆ. ಇಲ್ಲಿ ಮಾವೋವಾದಿಗಳ ಬಿಗಿ ಹಿಡಿತವಿದ್ದು, ಸ್ಫೋಟಕಗಳನ್ನು ಹುದುಗಿಸಿಡಲಾಗಿತ್ತು ಎಂದು ತಿಳಿದುಬಂದಿದೆ. "ಸೇತುವೆಯ ಅವಶೇಷಗಳಡಿಯಲ್ಲಿ ಪೊಲೀಸರು ಹೂತು ಹೋಗಿದ್ದು, ಎಲ್ಲರೂ ಸಾವನ್ನಪ್ಪಿದ್ದಾರೆ" ಎಂದು ಪೊಲೀಸ್ ಅಧಿಕಾರಿ ಗಿರಿಧಾರಿ ನಾಯಕ್ ದೂರವಾಣಿ ಮುಖಾಂತರ ತಿಳಿಸಿದ್ದಾರೆ.
ಚುನಾವಣಾಧಿಕಾರಿಗಳಿಗೆ ಬೆಂಗಾವಲಾಗಿ ತೆರಳುತ್ತಿದ್ದ ಪೊಲೀಸ್ ಜೀಪು ಇದಾಗಿತ್ತು. ಆದರೆ ಚುನಾವಣಾಧಿಕಾರಿಗಳಿಗೆ ಸ್ಫೋಟದಿಂದ ಯಾವುದೇ ತೊಂದರೆಯಾಗಿಲ್ಲ. ಸ್ಫೋಟದ ನಂತರ ಬಂಡುಕೋರರು ಕಾಡಿನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಅಮರನಾಥ ಉಪಾಧ್ಯಾಯ ತಿಳಿಸಿದ್ದಾರೆ.
ಇಲ್ಲಿ ನವೆಂಬರ್ 14ರಂದು ನಡೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮತದಾನ ಬಹಿಷ್ಕರಿಸುವಂತೆ ಮಾವೋವಾದಿಗಳು ಜನತೆಗೆ ಕರೆ ನೀಡಿದ್ದರು. ಬಡ ರೈತರ ಹಕ್ಕು ಮತ್ತು ಭೂರಹಿತ ಕಾರ್ಮಿಕರ ಪರವಾಗಿ ಹೋರಾಡುತ್ತಿದ್ದೇವೆ ಎಂದು ಮಾವೋವಾದಿಗಳು ಹೇಳಿಕೊಳ್ಳುತ್ತಿದ್ದು, ಸರಕಾರಿ ಆಸ್ತಿ ಮತ್ತು ಪೊಲೀಸರ ಮೇಲೆ ಇಲ್ಲಿ ನಿರಂತರ ದಾಳಿಗಳು ನಡೆಯುತ್ತಲೇ ಇವೆ. ಇತ್ತೀಚೆಗಷ್ಟೇ ಇಬ್ಬರು ಸರಕಾರಿ ಅಧಿಕಾರಿಗಳನ್ನು ಇದೇ ರೀತಿ ಕೊಲ್ಲಲಾಗಿತ್ತು. |