ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹಾಗೂ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್‌ಗೆ ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) ಅಧಿಕಾರಿಗಳು ನೀಡಿರುವ ಕಿರುಕುಳದ ಬಗ್ಗೆ ಉತ್ತರ ನೀಡುವಂತೆ ಮೋಕಾ ಕೋರ್ಟ್ ಮಂಗಳವಾರ ಮಹಾರಾಷ್ಟ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಬಂಧಿತ ಆರೋಪಿಗಳಾದ ಸಾಧ್ವಿ ಹಾಗೂ ಪುರೋಹಿತ್ ಅವರ ಆರೋಪ ನಿರಾಧಾರ ಎಂದು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಎಟಿಎಸ್ ವರಿಷ್ಠ, ಈ ಬಗ್ಗೆ ನ್ಯಾಯಾಲಯಕ್ಕೆ ಶೀಘ್ರವೇ ಪ್ರತ್ಯುತ್ತರ ನೀಡುವುದಾಗಿ ತಿಳಿಸಿದ್ದಾರೆ.
ಸೋಮವಾರ ಸ್ಫೋಟ ಪ್ರಕರಣದ ಶಂಕಿತ ಆರೋಪಿಗಳಾದ ಸಾಧ್ವಿ ಪ್ರಜ್ಞಾ ಸಿಂಗ್, ಕರ್ನಲ್ ಪುರೋಹಿತ್ ಹಾಗೂ ಅಜಯ್ ರಾಹಿರ್‌ಕಾರ್ ಅವರನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ, ತಮಗೆ ಎಟಿಎಸ್ ಅಧಿಕಾರಿಗಳು ದೈಹಿಕವಾಗಿ ಕಿರುಕುಳ ನೀಡಿದ್ದಲ್ಲದೇ, ಕೊಲ್ಲುವ ಬೆದರಿಕೆಯನ್ನೂ ಒಡ್ಡಿರುವುದಾಗಿ ಗಂಭೀರವಾಗಿ ಆರೋಪಿಸಿದ್ದರು.
ಆ ಆರೋಪದ ಹಿನ್ನೆಲೆಯಲ್ಲಿ ಮೋಕಾ ನ್ಯಾಯಾಲಯ ಮೂವರು ಮಂದಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಬೇಕೆಂಬ ಮನವಿಯನ್ನು ತಿರಸ್ಕರಿಸಿತ್ತು.
ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ, ಮೂಲಭೂತವಾದಿ ಹಿಂದೂ ಸಂಘಟನೆಯಾದ ಅಭಿನವ್ ಭಾರತ್ ಸಂಸ್ಥೆ ಕೂಡ ಇದರಲ್ಲಿ ಭಾಗಿಯಾಗಿದೆಯೇ ಎಂಬ ಕುರಿತು ತನಿಖೆ ನಡೆಸುವ ಅಗತ್ಯವಿರುವುದರಿಂದ, ಮೂವರು ಆರೋಪಿಗಳನ್ನು ಕಸ್ಟಡಿಗೆ ಒಪ್ಪಿಸಬೇಕೆಂದು ಎಟಿಎಸ್ ಮನವಿ ಸಲ್ಲಿಸಿತ್ತು.
ಆದರೆ ಆರೋಪಿಗಳ ಗಂಭೀರ ಆರೋಪವನ್ನು ಗಣನೆಗೆ ತೆಗೆದುಕೊಂಡ ವಿಶೇಷ ಮೋಕಾ ನ್ಯಾಯಾಲಯದ ನ್ಯಾಯಾಧೀಶರಾದ ವೈ.ಡಿ.ಶಿಂಧೆ ಅವರು ಎಟಿಎಸ್ ಅಧಿಕಾರಿಗಳ ಮನವಿಯನ್ನು ತಿರಸ್ಕರಿಸಿ, ಉಳಿದ ನಾಲ್ಕು ಆರೋಪಿಗಳು ಸೇರಿದಂತೆ ಏಳು ಮಂದಿಗೂ ಡಿಸೆಂಬರ್ 3ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ನೀಡಿದರು. |