ಮಾಲೆಗಾಂವ್ ಸ್ಫೋಟಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಭಯೋತ್ಪಾದನಾ ನಿಗ್ರಹ ದಳದ ಮೇಲೆ ಹೊರಿಸಲಾಗಿರುವ ಆಪಾದನೆಗಳನ್ನು ತಳ್ಳಿಹಾಕಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್, ಈ ತನಿಖಾ ಸಂಸ್ಥೆಯು ಕಾನೂನಿನ ಪರಿಧಿಯಲ್ಲೇ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಶಿವಸೇನೆ-ಬಿಜೆಪಿ ಆಡಳಿತವಿದ್ದಾಗಲೂ, ಇದೇ ಎಟಿಎಸ್ ಹಲವಾರು ಪ್ರಕರಣಗಳ ತನಿಖೆ ನಡೆಸಿತ್ತು ಎಂದು ಅವರು ಪೂರ್ವ ಮಹಾರಾಷ್ಟ್ರದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ ನುಡಿದರು. ಶಿವಸೇನೆ-ಬಿಜೆಪಿ ಆಡಳಿತವಿದ್ದ ಕಾಲದಲ್ಲಿ ಎಟಿಎಸ್‌ನತ್ತ ಯಾಕೆ ಬೆಟ್ಟುಮಾಡಲಾಗಿಲ್ಲ ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಆರು ಮಂದಿಯ ಸಾವಿಗೆ ಕಾರಣವಾದ ಸೆಪ್ಟೆಂಬರ್ 29ರ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಟಿಎಸ್ ಇದುವರೆಗೆ 11 ಮಂದಿಯನ್ನು ಬಂಧಿಸಿದೆ. ಇವರಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಹಾಗೂ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಮತ್ತು ಇತರರು, ಬಂಧನದಲ್ಲಿದ್ದ ವೇಳೆ ತಮ್ಮನ್ನು ಹಿಂಸಿಸಲಾಗಿದೆ ಎಂದು ದೂರಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದೂ ಹೇಳಿದ್ದಾರೆ.
ಮುಖ್ಯಮಂತ್ರಿ ದೇಶ್‌ಮುಖ್ ಅವರು ಮಧ್ಯಪ್ರದೇಶಕ್ಕೆ ಚುನಾವಣಾ ಭಾಷಣಕ್ಕಾಗಿ ತೆರಳುತ್ತಿದ್ದ ವೇಳೆ ಬಿರ್ಸಿ ವಿಮಾನನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಸಂವಾದ ಕಾರ್ಯ ನಡೆಸಿದರು. ಆರು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಬಹುದೆಂಬ ವಿಶ್ವಾಸ ವ್ಯಕ್ತಪಡಿಸಿದರು. |