ಭಾರತೀಯ ಜನತಾ ಪಕ್ಷ ಭಯೋತ್ಪಾದನೆಯ ವಿಷಯದ ಮೂಲಕ ದೇಶವನ್ನು ಒಡೆಯುವ ಕೆಲಸಕ್ಕೆ ಮುಂದಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗಂಭೀರವಾಗಿ ಆರೋಪಿಸಿದ್ದಾರೆ.ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ ಚುನಾವಣೆಯಲ್ಲಿ ಯಾವತ್ತೂ ಸಾಮಾಜಿಕ ಕಳಕಳಿಯ ವಿಷಯದ ಬಗ್ಗೆ ಧ್ವನಿ ಎತ್ತದೇ ಕೇವಲ ಭಯೋತ್ಪಾದನೆಯೊಂದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ದೂರಿದ ಅವರು, ಬಿಜೆಪಿ ಯಾವಾಗಲೂ ಒಡೆದು ಆಳುವ ನೀತಿಯನ್ನೇ ಅನುಸರಿಸುತ್ತಿದೆ ಎಂದು ಹರಿಹಾಯ್ದರು.ಆ ನಿಟ್ಟಿನಲ್ಲಿ ಅವರು ಕೋಮುಸೌಹಾರ್ದತೆಯನ್ನು ಕದಡುತ್ತಿರುವುದಲ್ಲದೇ, ರಾಷ್ಟ್ರದ ಏಕತೆಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಸೋನಿಯಾ ಇಲ್ಲಿನ ಭೀತೆಬಾ ಗ್ರಾಮದಲ್ಲಿ ಚುನಾವಣಾ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದರು.ಭಯೋತ್ಪಾದನೆ ಬಗ್ಗೆ ಮಾತನಾಡಲಿಕ್ಕೆ ಅವರಿಗೆ ಎಷ್ಟು ಧೈರ್ಯ? ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಅಫ್ಘಾನಿಸ್ತಾನದ ಕಂದಾಹಾರ್ ಉಗ್ರರನ್ನು ರಕ್ಷಣಾ ವ್ಯವಸ್ಥೆಯೊಂದಿಗೆ ಕರೆದೊಯ್ದವರು ಬಿಜೆಪಿ ಮುಖಂಡರಲ್ಲವೇ ಹಾಗೂ ಸಂಸತ್ ಮೇಲೆ ದಾಳಿ ನಡೆದಾಗ ಇದೀಗ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಅಡ್ವಾಣಿಯವರು ಗೃಹಸಚಿವರಾಗಿದ್ದ ಸಂದರ್ಭದಲ್ಲಿಯೇ ಎಂದು ತಿರುಗೇಟು ನೀಡಿದ್ದಾರೆ.ಸಂಘಪರಿವಾರ ಗಡಣದ ವಿರುದ್ಧ ಹರಿಹಾಯ್ದು ಸೋನಿಯಾ, ಬೇರೆಯವರಿಗೆ ಪಾಠ ಹೇಳುವ ಮೊದಲು ಅವರ ಸಂಘಟನೆಗಳನ್ನು ಹದ್ದುಬಸ್ತಿನಲ್ಲಿಡಲಿ. ಭಯೋತ್ಪಾದನೆ ಎನ್ನುಂತಹದ್ದು ಒಂದು ಧರ್ಮಕ್ಕೆ ಸಂಬಂಧಿಸಿದ್ದಲ್ಲ, ಅದು ರಾಷ್ಟ್ರದ ಶತ್ರುವಾಗಿದೆ ಎಂದು ಹೇಳಿದರು. |