ಮುಂಬೈ: ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮುಂಬೈಯಲ್ಲಿ ದಾಳಿ ನಡೆಸಲಾಗಿದ್ದು, ರಾಷ್ಟ್ರದ ವಾಣಿಜ್ಯನಗರಿ ಉಗ್ರರ ಆರ್ಭಟಕ್ಕೆ ಕಂಗಾಲಾಗಿದೆ. ಮುಂಬೈಯನ್ನು ಮತ್ತೆ ಗುರಿಯಾಗಿಸಿ ದಾಳಿ ನಡೆಸಿದ ಡೆಕ್ಕನ್ ಮುಜಾಹಿದ್ದೀನ್ ಎಂಬ ಹೊಸ ಸಂಘಟನೆಯು, ಈ ಹಿಂದಿನ ದಾಳಿಗಳಿಗಿಂತ ವಿಭಿನ್ನವಾದ ರೀತಿಯಲ್ಲಿ ದಾಳಿ ನಡೆಸಿದ್ದು ರಾಷ್ಟ್ರ ತಲ್ಲಣಗೊಂಡಿದೆ.ಈ ಹಿಂದಿನ ಉಗ್ರರ ದಾಳಿಗಳಿಗಿಂತ ಭಿನ್ನ ರೀತಿಯಲ್ಲಿ ರಾತ್ರಿಯ ವೇಳೆ ಈ ದಾಳಿ ನಡೆಸಲಾಗಿದ್ದು, ಉಗ್ರರು ಬಾಂಬ್ ಸ್ಫೋಟ ಮತ್ತು ಗುಂಡು ಹಾರಾಟವನ್ನು ನಡೆಸಿದ್ದಾರೆ. ಗೇಟ್‌ವೇ ಸಮೀಪದ ತಾಜ್ ಹೋಟೇಲ್ ಮತ್ತು ನರಿಮನ್‌ಪಾಯಿಂಟ್ ಸಮೀಪದ ಒಬೆರಾಯ್ ಟ್ರೈಡೆಂಟ್ ಹೋಟೇಲುಗಳಲ್ಲಿ ಒಳಸೇರಿಕೊಂಡು ಅಲ್ಲಿದ್ದ ಪ್ರವಾಸಿಗಳನ್ನು ಒತ್ತಾಯಾಳುಗಳನ್ನಾಗಿ ಇರಿಸಿಕೊಂಡು ಭದ್ರತಾ ಪಡೆಗಳೊಂದಿಗೆ ಗುಂಡಿನ ಕಾದಾಟ ಮುಂದುವರಿಸಿದ್ದಾರೆ.ಈ ಸರ್ತಿಯ ದಾಳಿಗೆ ಉಗ್ರರು ಎಕೆ 47 ರೈಫಲ್‌ಗಳು, ಪ್ರಬಲ ಶಕ್ತಿಯ ಕೈ ಬಾಂಬ್ ಮತ್ತು ಭಾರೀ ಪ್ರಮಾಣದ ಸ್ಫೋಟಕಗಳನ್ನು ಬಳಸಿದ್ದಾರೆ.ಅತ್ಯಂತ ಜನನಿಬಿಡ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ(ಹಿಂದಿನ ವಿಕ್ಟೋರಿಯಾ ಟರ್ಮಿನಸ್), ಸಾಂತಕ್ರೂಜ್ ನಲ್ಲಿರುವ ದೇಶಿಯ ವಿಮಾನ ನಿಲ್ದಾಣ, ಸಿಎಸ್‌ಟಿ ಸಮೀಪದ ಕಾಮಾ ಮತ್ತು ಜಿಟಿ ಆಸ್ಪತ್ರೆಗಳು, ಮೆಟ್ರೋ ಆಡ್‌ಲ್ಯಾಬ್ ಮಲ್ಟಿಫ್ಲೆಕ್ಸ್ ಮತ್ತು ಮಡ್‌ಗಾಂವ್ ಡಾಕ್‌ಯಾರ್ಡ್‌ಗಳಲ್ಲಿ ಉಗ್ರರು ಅಟ್ಟಹಾಸಗೈದಿದ್ದಾರೆ.ಉಗ್ರರೊಂದಿಗೆ ಗುಂಡಿನ ಕಾದಾಟ ನಡೆಸಿರುವ ವೇಳೆ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಮುಂಬೈ ಹೆಚ್ಚುವರಿ ಪೊಲೀಸ್ ಆಯುಕ್ತ ಅಶೋಕ್ ಕಮ್ಟೆ ಮತ್ತು ಎನ್‌ಕೌಂಟರ್ ಪಂಟ ವಿಜಯ್ ಸಾಲಸ್ಕರ್ ಅವರೂ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.ಅಂತಾರಾಷ್ಟ್ರೀಯ ಗಮನ ಸೆಳೆಯುವ ಗುರಿಯಿಂದ ದಾಳಿ ನಡೆಸಿರುವ ಉಗ್ರರು 40 ಮಂದಿ ಬ್ರಿಟಿಷ್ ಪ್ರಜೆಗಳು ಹಾಗೂ ಇತರ ವಿದೇಶಿ ಪ್ರಜೆಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಹಿಂದೂಸ್ತಾನ್ ಯುನಿ ಲಿವರ್ ಸಂಸ್ಥೆಯ ಮುಖ್ಯಸ್ಥ ಹರೀಷ್ ಮನ್ವಾನಿ ಮತ್ತು ಕಂಪೆನಿಯ ಸಿಇಓ ನಿತಿನ್ ಪರಾಂಜಪೆ ಅವರುಗಳೂ ಒಬೆರಾಯ್ ಹೋಟೇಲಿನಲ್ಲಿ ಉಗ್ರರು ಒತ್ತೆಯಾಳುಗಳಾಗಿ ಇರಿಸಿಕೊಂಡವರಲ್ಲಿ ಸೇರಿದ್ದಾರೆ. ಅಲ್ಲದೆ ಸಂಸ್ಥೆಯ ಆಂತರಿಕ ಮಂಡಳಿಯ ಎಲ್ಲಾ ಸದಸ್ಯರು ಹೋಟೇಲಿನಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೆ ಇಬ್ಬರು ಉಗ್ರರೂ ಹೋಟೇಲಿನೊಳಗಡೆ ಇದ್ದು, ಸೇನೆಯು ಉಗ್ರರನ್ನು ಸದೆಬಡಿಯಲು ಹೋಟೇಲಿನೊಳಕ್ಕೆ ಪ್ರವೇಶಿಸಿದೆ.ಮುಂಬೈ ದಾಳಿಯ ಜವಾಬ್ದಾರಿ ಹೊತ್ತು, ಡೆಕ್ಕನ್ ಮುಜಾಹಿದ್ದೀನ್ ಎಂಬ ಸಂಘಟನೆಯು ಸುದ್ದಿ ಸಂಸ್ಥೆಗಳಿಗೆ ಇಮೇಲ್ ಕಳುಹಿಸಿದೆ. ಡೆಕ್ಕನ್ ಮುಜಾಹಿದ್ದೀನ್ ಎಂಬ ಉಗ್ರವಾದ ಸಂಘಟನೆಯ ಹೆಸರು ಇದೇ ಮೊದಲಬಾರಿಗೆ ಹೊರಬಿದ್ದಿದೆ.ಸೇನೆ ಮತ್ತು ನೌಕಾದಳವು ಕಟ್ಟೆಚ್ಚರ ವಹಿಸಿದೆ. 65 ಸೇನಾ ಕಮಾಂಡೋಗಳು ಮತ್ತು 200 ಎನ್ಎಸ್‌ಜಿ ಕಮಾಂಡೋಗಳು ಮುಂಬೈಗೆ ಧಾವಿಸಿದ್ದಾರೆ ಎಂದು ಗೃಹಸಚಿವ ಶಿವರಾಜ್ ಪಾಟೀಲ್ ಹೇಳಿದ್ದಾರೆ.ಏನ್ಮಧ್ಯೆ, ಲಷ್ಕರೆ-ಇ-ತೊಯ್ಬಾದ ಕೈವಾಡವಿದೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ. ಅಲ್ಲದೆ ಉಗ್ರರು ಸಮುದ್ರದ ಮೂಲಕ ಬಂದಿದ್ದಾರೆ ಎಂದೂ ಕೆಲವು ಮೂಲಗಳು ಹೇಳಿವೆ. ಗೇಟ್‌ವೇ ಸಮೀಪ ಸ್ಫೋಟಕಗಳನ್ನು ತುಂಬಿರುವ ಬೋಟ್ ಒಂದು ಪತ್ತೆಯಾಗಿದೆ.ಉಗ್ರರು ರೈಲ್ವೇ ನಿಲ್ದಾಣ, ಮಾರುಕಟ್ಟೆ ಪ್ರದೇಶ, ಹೋಟೇಲು ಹೀಗೆ ಎಲ್ಲೆಂದರಲ್ಲಿ ದಾಳಿ ನಡೆಸಿದ್ದಾರೆ. ಇವುಗಳಲ್ಲಿ ಹಲವು ಸ್ಥಳಗಳು ಪೊಲೀಸ್ ಆಯುಕ್ತರ ಕಚೇರಿಯ ಒಂದು ಕಿ.ಮೀ ವ್ಯಾಪ್ತಿಯಲ್ಲಿದೆ.ಏಳು ಕಡೆಗಳಲ್ಲಿ ಸ್ವಯಂಚಾಲಿತ ಶಸ್ತಾಸ್ತ್ರಗಳು ಮತ್ತು ಗ್ರೆನೇಡುಗಳ ಮೂಲಕ ದಾಳಿ ನಡೆಸಲಾಗಿದೆ. ಉಗ್ರರು ತಾಜ್ ಮತ್ತು ಒಬೇರಾಯ್ ಹೋಟೇಲುಗಳು ಮತ್ತು ಜಿಟಿ ಆಸ್ಪತ್ರೆಯಲ್ಲಿ ಅಡಗಿಕೊಂಡಿದ್ದಾರೆ. ಈ ಮೂರೂ ಕಡೆಗಳಲ್ಲಿಯೂ ಗುಂಡಿನ ಕಾಳಗ ನಡೆಯುತ್ತಿದೆ ಎಂದು ಮಹಾರಾಷ್ಟ್ರ ಡಿಜಿಪಿ ಎ.ಎನ್.ರಾಯ್ ಹೇಳಿದ್ದಾರೆ. |