ವಾಣಿಜ್ಯ ನಗರಿಯ ಐಶಾರಾಮಿ ಒಬೆರಾಯ್ ಹೋಟೆಲ್‌ನೊಳಗಡೆ ಉಗ್ರಗಾಮಿಗಳು ವಿದೇಶಿ ಪ್ರವಾಸಿಗರನ್ನು ಒತ್ತೆಯಾಳುಗಳನ್ನಾಗಿಸಿಕೊಂಡಿದ್ದು, ಎಲ್ಲಾ ಮುಜಾಹಿದೀನ್ ಉಗ್ರರನ್ನು ಬಿಡುಗಡೆಗೊಳಿಸಬೇಕೆಂದು ಷರತ್ತು ವಿಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸರಣಿ ಬಾಂಬ್ ಸ್ಫೋಟ, ರೈಲು ಸ್ಫೋಟಗಳ ನಂತರ ಇದೀಗ ಬುಧವಾರ ರಾತ್ರಿ ಏಕಾಏಕಿ ಉಗ್ರರು ನಡೆಸಿದ ಬಾಂಬ್ ದಾಳಿ, ಶೂಟೌಟ್ ಘಟನೆಯಿಂದ ವಾಣಿಜ್ಯ ನಗರಿ ಮತ್ತೆ ತಲ್ಲಣಗೊಂಡಿದೆ.
ಇದೀಗ ಒಬೆರಾಯ್ ಹೋಟೆಲ್ ಒಳಗಡೆ ಏಳು ಮಂದಿ ಅಮೆರಿಕ ಪ್ರವಾಸಿಗರನ್ನು ಒತ್ತೆಯಾಳುಗಳನ್ನಾಗಿಸಿಕೊಂಡಿದ್ದು, ಭಾರತ ಸರಕಾರ ಬಂಧಿಸಿರುವ ಎಲ್ಲಾ ಮುಜಾಹಿದೀನ್ ಉಗ್ರರನ್ನು ಬಿಡುಗಡೆಗೊಳಿಸಬೇಕು ಎಂದು ತಾಕೀತು ಮಾಡಿರುವ ಉಗ್ರರು, ಆ ಬಳಿಕವೇ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಪಟ್ಟು ಹಿಡಿದಿವೆ.
ಕೂಡಲೇ ಎಲ್ಲಾ ಮುಜಾಹಿದೀನ್ ಉಗ್ರರನ್ನು ಬಿಡುಗಡೆ ಮಾಡಿ ಹಾಗೂ ಭಾರತದಲ್ಲಿ ಮುಸ್ಲಿಂರು ಯಾವುದೇ ತೊಂದರೆ ಅನುಭವಿಸದಂತೆ ಬದಕಲು ಬಿಡಿ ಎಂದು ಹೇಳಿದೆ.
ಸುಮಾರು ಹತ್ತು ಪ್ರಮುಖ ಸ್ಥಳಗಳ ಮೇಲೆ ನಿನ್ನೆ ರಾತ್ರಿ ಉಗ್ರರು ದಾಳಿ ನಡೆಸಿದ್ದು, ತಾಜ್ ಹೋಟೆಲ್‌ನಲ್ಲಿಯೂ ಉಗ್ರರು ಠಿಕಾಣಿ ಹೂಡಿದ್ದರ ಪರಿಣಾಮವಾಗಿ ಗುರುವಾರ ಮುಂಜಾನೆ ಕಮಾಂಡೋ ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭದಲ್ಲಿ ಘರ್ಷಣೆ ನಡೆದಿರುವುದಾಗಿ ಹೇಳಿವೆ.
ಒಂಬತ್ತು ಉಗ್ರರ ಬಂಧನ: ಎರಡು ಪ್ರತ್ಯೇಕ ಘಟನೆಗಳಲ್ಲಿ ನಡೆದ ಘರ್ಷಣೆಯಲ್ಲಿ ಶಂಕಿತ ಐವರು ಉಗ್ರರು ಬಲಿಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಒಂಬತ್ತು ಮಂದಿ ಉಗ್ರರನ್ನು ಬಂಧಿಸಿರುವುದಾಗಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಆರ್.ಆರ್.ಪಾಟೀಲ್ ತಿಳಿಸಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದರು. |