ಕಳೆದ ರಾತ್ರಿ ಮುಂಬೈಯಲ್ಲಿ ಉಗ್ರರ ದಾಳಿಯನ್ನು ಕಟುವಾಗಿ ಟೀಕಿಸಿರುವ ವಿರೋಧ ಪಕ್ಷದ ನಾಯಕ ಎಲ್.ಕೆ.ಆಡ್ವಾಣಿ, ಇಂತಹ ದಾಳಿಗಳನ್ನು ರಾಷ್ಟ್ರವು ಏಕತೆಯಿಂದ ಮತ್ತು ಒಗ್ಗಟ್ಟಿನಿಂದ ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಉಗ್ರರ ದಾಳಿಯ ಕುರಿತು ಸುದ್ದಿಯಾಗುತ್ತಲೇ ಮುಂಬೈಗೆ ತೆರಳಲು ಮುಂದಾಗಿದ್ದ ಆಡ್ವಾಣಿ, ಬಳಿಕ ತನ್ನ ಯೋಜನೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರ ಸಲಹೆಯಂತೆ ಬದಲಿಸಿದ್ದು, ಪ್ರಧಾನಿಯೊಂದಿಗೆ ಮುಂಬೈಗೆ ತೆರಳಲಿದ್ದಾರೆ. ಅವರು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಚಾರ ತಿಳಿಸಿದ್ದಾರೆ.
ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಮುಗಿದು, ಒತ್ತೆಯಾಳುಗಳ ಬಿಡುಗಡೆಯಾಗುವ ತನಕ ತಮ್ಮ ಭೇಟಿಯನ್ನು ಮುಂದಕ್ಕೆ ಹಾಕುವಂತೆ ಮಹಾರಾಷ್ಟ್ರ ಸರ್ಕಾರವು ಈ ನಾಯಕರನ್ನು ವಿನಂತಿಸಿದೆ.
ಪ್ರಧಾನಿಯವರ ಮನವಿಯನ್ನು ತಾನು ಸ್ವೀಕರಿಸಿರುವುದಾಗಿ ಹೇಳಿರುವ ಆಡ್ವಾಣಿ, ಮುಂಬೈ ಭೇಟಿಯ ಸಮಯವನ್ನು ಪ್ರಧಾನಿ ಸಿಂಗ್ ಬಳಿಕ ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸರಣಿ ಸ್ಫೋಟಗಳು 1993ರ ಸ್ಫೋಟಗಳ ಮುಂದುವರಿಕೆ ಎಂದು ಆಡ್ವಾಣಿ ಉಗ್ರರ ದಾಳಿಯನ್ನು ಬಣ್ಣಿಸಿದ್ದಾರೆ. |