ಉಗ್ರರ ದಾಳಿಗೆ ಈಡಾಗಿರುವ, ಗೇಟ್‌ವೇ ಆಫ್ ಇಂಡಿಯಾದ ಸಮೀಪದಲ್ಲಿರುವ ತಾಜ್ ಇಂಟರ್‌ಕಾಂಟಿನೆಂಟಲ್ ಹೋಟೇಲಿನಲ್ಲಿ ಗುರುವಾರ ಮತ್ತೆ ಭಾರೀ ಸ್ಫೋಟ ಸಂಭವಿಸಿದೆ. ಅಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಈ ಮಧ್ಯೆ, ಟ್ರೈಡೆಂಟ್ ಹೋಟೇಲಿನಲ್ಲಿ ಇನ್ನೂ ಅವಿತುಕೊಂಡಿರುವ 10-12 ಭಯೋತ್ಪಾದಕರು ಅಲ್ಲಿನ ಅತಿಥಿಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ. ಇಸ್ರೇಲ್ ಹಾಗೂ ಕೆನಡಾದವರೂ ಸೇರಿದ್ದಾರೆ. ಟ್ರೈಡೆಂಟ್‌ನಿಂದ ಒಂಭತ್ತು ಮಂದಿಯನ್ನು ರಕ್ಷಿಸಲಾಗಿದೆ. ತಾಜ್ ಹೋಟೇಲಿನಲ್ಲಿ ಇನ್ನು ಯಾವುದೇ ಅತಿಥಿಗಳು ಒತ್ತೆಯಾಳುಗಳಾಗಿ ಉಳಿದಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.
ಹಡಗಿನಲ್ಲಿ ಬಂದಿದ್ದಾರೆಂದು ಹೇಳಲಾಗಿರುವ ಉಗ್ರರು ಬಾಂಬ್ ಸ್ಫೋಟ, ಗ್ರೆನೇಡು ದಾಳಿ, ಹಾಗು ಎಕೆ 47 ರೈಫಲ್‌ನಲ್ಲಿ ಗುಂಡು ಹಾರಾಟ ನಡೆಸಿದ್ದು, ಒಂಭತ್ತು ವಿದೇಶಿಯರು ಸೇರಿದಂತೆ ಕನಿಷ್ಠ 101 ಮಂದಿ ಸಾವನ್ನಪ್ಪಿದ್ದಾರೆ.
ಉಗ್ರರು, ದಕ್ಷಿಣ ಮುಂಬೈಯ ಪಂಚತಾರಾ ಹೋಟೇಲುಗಳು, ರೈಲ್ವೇ ನಿಲ್ದಾಣಗಳು, ಆಸ್ಪತ್ರೆಗಳು ಸೇರಿದಂತೆ 10 ಸಾರ್ವಜನಿಕ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ಹಿಂದೆ ನಡೆಸಿರುವುದಕ್ಕಿಂತ ವಿಭಿನ್ನ ರೀತಿಯಲ್ಲಿ ದಾಳಿ ನಡೆಸಿರುವ ಉಗ್ರರು, ಸಾರ್ವಜನಿಕರ ಮೇಲೆ ಗುಂಡುಹಾರಾಟ ನಡೆಸಿದ್ದಾರೆ. |