ನವದೆಹಲಿ: ಪ್ರಧಾನಿ ನೇತೃತ್ವದಲ್ಲಿ ಗುರುವಾರ ನಡೆಸಲಾಗಿರುವ ಸಂಪುಟ ಸಭೆಯಲ್ಲಿ, ರಾಜ್ಯಗಳ ಭದ್ರತಾ ಅಗತ್ಯಗಳ ಪರಿಶೀಲನೆಗಾಗಿ ಸಮಿತಿಯೊಂದನ್ನು ರೂಪಿಸಲು ತೀರ್ಮಾನಿಸಲಾಯಿತು ಎಂದು ಗೃಹ ಸಚಿವ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ. ಮುಂಬೈಯಲ್ಲಿ ನಡೆಸಲಾಗಿರುವ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟ ಸಭೆ ನಡೆಸಲಾಗಿತ್ತು.
ಕೊಲಬಾ, ತಾಜ್ ಹೋಟೇಲ್ ಮತ್ತು ಟ್ರೈಡೆಂಟ್ ಹೋಟೇಲುಗಳಲ್ಲಿ ಎನ್ಎಸ್‌ಜಿ ಕಮಾಂಡೋಗಳು ಉಗ್ರನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದು, ಒತ್ತೆಯಾಳುಗಳ ಸುರಕ್ಷೆ ಸರಕಾರದ ಪ್ರಮುಖ ಕಾಳಜಿಯಾಗಿದೆ ಎಂದು ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪಾಟೀಲ್ ಹೇಳಿದ್ದಾರೆ.
ಎನ್ಎಸ್‌ಜಿಯ 200 ಕಮಾಂಡೋಗಳನ್ನು ಮುಂಬೈಗೆ ಕಳುಹಿಸಿರುವ ಪಾಟೀಲ್, ತಾನು ಸ್ವತಹ ಮುಂಬೈಗೆ ಭೇಟಿ ನೀಡಿದ್ದಾರೆ. ಉಗ್ರನಿಗ್ರಹ ಕಾರ್ಯಾಚರಣೆಯ ವೀಕ್ಷಣೆಗೆ ಅವರು ಎನ್ಎಸ್‌ಜಿ ನಿರ್ದೇಶಕ ಜೆ.ಕೆ.ದತ್ ಅವರೊಂದಿಗೆ ಆಗಮಿಸಿದ್ದರು.
ದಾಳಿಯ ಕುರಿತು ಗುಪ್ತಚರ ಮಾಹಿತಿಗಳು ಇದ್ದುವಾದರೂ, ಸಮಯ, ಜಾಗಗಳ ಕುರಿತು ಸ್ಪಷ್ಟನೆ ಇರಲಿಲ್ಲ. ಅಲ್ಲದೆ, ಉಗ್ರರು ಯಾವ ಮಾರ್ಗವಾಗಿ ರಾಷ್ಟ್ರವನ್ನು ಪ್ರವೇಶಿಸುತ್ತಾರೆ ಎಂಬುದೂ ಸ್ಪಷ್ಟವಾಗಿರಲಿಲ್ಲ. ಅವರು ರಸ್ತೆ ಮಾರ್ಗ, ವಾಯು ಮಾರ್ಗ ಇಲ್ಲವೇ ಸಮುದ್ರ ಮಾರ್ಗವಾಗಿ ಬರುತ್ತಾರೆಯೇ ಎಂಬುದು ತಿಳಿದಿರಲಿಲ್ಲ ಎಂದೂ ಸಚಿವರು ನುಡಿದರು.
ಇಂತಹ ಭಾರೀ ಪ್ರಮಾಣದ ದಾಳಿ ಕುರಿತು ಯಾವುದೇ ಗುಪ್ತಚರ ಮಾಹಿತಿ ಇರಲಿಲ್ಲ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಅವರ ಹೇಳಿಕೆಯನ್ನು ವಿವಾದಾಸ್ಪದವಾಗಿಸಲು ತಾನು ಬಯಸುವುದಿಲ್ಲ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದರು.
ಉಗ್ರರ ದಾಳಿಯಿಂದ ಸರ್ಕಾರ ಬೆದರಲಿಲ್ಲ ಎಂದು ಹೇಳಿದ ಗೃಹಸಚಿವರು ಉಗ್ರರಿಗೆ ತಕ್ಕ ಉತ್ತರ ನೀಡುವುದಾಗಿ ನುಡಿದರು. ಮುಂಬೈ ಜನತೆ ಅತ್ಯಂತ ಧೈರ್ಯಶಾಲಿಗಳೆಂದ ಅವರು, ಜನತೆ ಒಗ್ಗಟ್ಟಿನಿಂದ ಭಯೋತ್ಪಾದಕರನ್ನು ಹಿಮ್ಮೆಟ್ಟಿಸಬೇಕು ಎಂದು ನುಡಿದರು. |