ರಾಷ್ಟ್ರೀಯ ಭದ್ರತಾ ದಳದ ಕಮಾಂಡೋ ಮತ್ತು ಸೇನೆಯ ಕಾರ್ಯಾಚರಣೆಯಿಂದ ಐಷಾರಾಮಿ ಹೊಟೇಲ್ ತಾಜ್ ಮಹಲನ್ನು ಗುರುವಾರ ತಡ ರಾತ್ರಿ ಉಗ್ರರಿಂದ ಮುಕ್ತಗೊಳಿಸಿದ್ದು, ಇದೀಗ ನಾರಿಮನ್ ಹೌಸ್ ಬಿಡುಗಡೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಇದೇ ವೇಳೆ ದಾಳಿಯಿಂದ ಮೃತಪಟ್ಟವರ ಸಂಖ್ಯೆ 130ಕ್ಕೇರಿದೆ.
ತಾಜ್ ಮಹಲ್ ಹೊಟೇಲಿನಲ್ಲಿ ಎನ್‌ಎಸ್‌ಜಿ ಕಮಾಂಡೋಗಳು ಮತ್ತು ಭೂಸೇನೆ ಗುಂಡಿನ ಕಾಳಗ ನಡೆಸಿ ಉಗ್ರರನ್ನು ಕೊಂದು ಹಾಕಿದ್ದು, ಒಬ್ಬನನ್ನು ಸೆರೆ ಹಿಡಿಯಲಾಗಿದೆ ಎಂದು ಮೂಲಗಳು ದೃಢಪಡಿಸಿವೆ. ಒಬೇರಾಯ್ ಟ್ರೆಂಡೆಂಟ್ ಹೊಟೇಲಿನಿಂದ ಒತ್ತೆಯಾಳುಗಳನ್ನು ಬಿಡಿಸಲಾಗಿದೆಯಾದರೂ ಉಗ್ರರು ಇನ್ನೂ ಒಳಗೆ ಅಡಗಿರುವ ಶಂಕೆಯಿದೆ.
ಇದುವರೆಗೆ ಒಟ್ಟು 16 ಮಂದಿ ಪೊಲೀಸರ ಸಹಿತ ಸತ್ತವರ ಸಂಖ್ಯೆ 130ಕ್ಕೇರಿದೆ. ಇವರಲ್ಲಿ ಆರು ಮಂದಿ ವಿದೇಶೀಯರು ಕೂಡ ಸೇರಿದ್ದಾರೆ. ಸುಮಾರು 325ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ. ಒಟ್ಟು ಎಂಟು ಮಂದಿ ಉಗ್ರಗಾಮಿಗಳನ್ನು ಇದುವರೆಗೆ ಸಂಹಾರ ಮಾಡಲಾಗಿದೆ.
ಇದೀಗ ಕಮಾಂಡೋಗಳು ನಾರಿಮನ್ ಹೌಸ್‌ನಲ್ಲಿ ತೀವ್ರ ಕಾರ್ಯಾಚರಣೆ ನಿರತರಾಗಿದ್ದಾರೆ. ನಾರಿಮನ್ ಹೌಸ್‌ನಲ್ಲಿ 20ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಾಳಾಗಿಟ್ಟುಕೊಂಡಿರುವ ಉಗ್ರರು ಕಮಾಂಡೋ ಪಡೆ ಮೇಲೆ ಸತತ ಗ್ರೆನೇಡ್ ದಾಳಿಯನ್ನೂ ನಡೆಸುತ್ತಿದ್ದಾರೆ.
ನಾರಿಮನ್ ಹೌಸ್‌ನಲ್ಲಿ ಒತ್ತೆಯಾಳುಗಳಾಗಿರುವವರ ಪೈಕಿ ನೈಜೀರಿಯಾ ಪ್ರಜೆಗಳು ಕೂಡ ಸೇರಿದ್ದಾರೆ. ಕಮಾಂಡೋಗಳು ಹೆಲಿಕಾಫ್ಟರ್ ಮೂಲಕ ದಾಳಿ ಆರಂಭಿಸಿದ್ದು, ನಾರಿಮನ್ ಹೌಸ್‌ನಲ್ಲಿ ಐದರಿಂದ ಆರರಷ್ಟು ಉಗ್ರರು ಅಡಗಿದ್ದಾರೆ ಎಂದು ಶಂಕಿಸಲಾಗಿದೆ. ಕಟ್ಟಡವನ್ನು ಸಂಪೂರ್ಣವಾಗಿ ಸುತ್ತುವರಿದಿರುವ ಸೇನೆ ಯಾವುದೇ ಕ್ಷಣದಲ್ಲಿ ಒತ್ತೆಯಾಳುಗಳನ್ನು ಬಿಡಿಸಿ ಹೊರ ತರುವ ಸಾಧ್ಯತೆಯಿದೆ.
ಸುಮಾರು 24 ಉಗ್ರರು ಈ ಕಾರ್ಯಾಚರಣೆಗಾಗಿ ತಿಂಗಳ ಹಿಂದೆ ತಯಾರಿ ಆರಂಭಿಸಿದ್ದು, 12 ಜನರಂತೆ ಎರಡು ತಂಡ ಹೊಟೇಲುಗಳಿಗೆ ಭೇಟಿ ಕೊಟ್ಟು ಚಲನವಲನಗಳನ್ನು ಅಭ್ಯಸಿಸಿದ್ದರು ಎಂದು ತಿಳಿದು ಬಂದಿದೆ. ಬಾಡಿಗೆ ಮನೆ ಪಡೆದು ವಾಸಿಸುತ್ತಿದ್ದ ಉಗ್ರರು ಯಾವುದೇ ರೀತಿಯಲ್ಲಿ ಸಂಶಯ ಬಾರದಂತೆ ನಡೆದುಕೊಂಡಿದ್ದರು.
ತಮಗೆ ಬೇಕಾದ ಆಹಾರ ವ್ಯವಸ್ಥೆಯನ್ನೂ ಮಾಡಿಕೊಂಡಿರುವ ಅವರು ಸುಮಾರು 50 ಸಾವಿರ ರೂಪಾಯಿ ಬೆಲೆ ಬಾಳುವ ದಿನಸಿ ವಸ್ತುಗಳನ್ನೂ ಖರೀದಿಸಿದ್ದರೆಂಬ ಮಾಹಿತಿ ಲಭಿಸಿದೆ.
|