ವಾಣಿಜ್ಯ ನಗರಿಯಲ್ಲಿನ ಉಗ್ರರ ಅಟ್ಟಹಾಸ ಶುಕ್ರವಾರವೂ ಮುಂದುವರಿದಿದ್ದು, ತಾಜ್ ಹೋಟೆಲ್‌ನಲ್ಲಿ ಮತ್ತೆ ರಾಷ್ಟ್ರೀಯ ಭದ್ರತಾ ಪಡೆ ಕಮಾಂಡೋ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಅಲ್ಲದೇ ಹೋಟೆಲ್‌ನ ಹಳೇ ಕಟ್ಟಡದ ನೆಲಮಹಡಿಯಲ್ಲಿ ಸ್ಫೋಟ ಸದ್ದೊಂದು ಕೇಳಿಸಿರುವುದಾಗಿಯೂ ಅಧಿಕಾರಿಗಳು ಹೇಳಿದ್ದಾರೆ. ಆದರೆ ಗುರುವಾರವಷ್ಟೇ ತಾಜ್ ಹೋಟೆಲ್‌ನಲ್ಲಿ ಕಮಾಂಡೋಗಳ ಜತೆ ಓರ್ವ ಉಗ್ರನ ಜತೆ ಮಾತ್ರ ಗುಂಡಿನ ಚಕಮಕಿ ಮುಂದುವರಿದಿರುವುದಾಗಿ ಇಂಡಿಯನ್ ಆರ್ಮಿ ಪಡೆ ಖಚಿತಪಡಿಸಿತ್ತು. ಅಲ್ಲದೇ ಎರಡೂ ಅಥವಾ ಅದಕ್ಕಿಂತ ಹೆಚ್ಚಿನ ಒತ್ತೆಯಾಳುಗಳು ಇರುವುದಾಗಿಯೂ ಹೇಳಿದ್ದರು.
ಇತ್ತಂಡಗಳ ನಡುವೆ ಏಳರಿಂದ ಎಂಟು ಸುತ್ತಿನ ಗುಂಡಿನ ಚಕಮಕಿ ನಡೆದಿದ್ದು, ತಾಜ್ ಹೋಟೆಲ್‌ನ ನೆಲಮಹಡಿಯಲ್ಲಿ ಉಗ್ರರು ಅಡಗಿರುವುದಾಗಿ ಶಂಕಿಸಲಾಗಿದ್ದು, ಗುರುವಾರ ರಾತ್ರಿ 12ಗಂಟೆ ಬಳಿಕ ಮತ್ತೆ ಗುಂಡಿನ ದಾಳಿ ಆರಂಭವಾಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಹೋಟೆಲ್‌ನಲ್ಲಿನ ಬಹುತೇಕ ಪ್ರವಾಸಿಗರು, ಸಿಬ್ಬಂದಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಎನ್.ತಾಂಬುರಾಜ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ತಾಜ್ ಹೋಟೆಲ್‌ನಲ್ಲಿ ಕಾರ್ಯಚರಣೆ ಇನ್ನೂ ಮುಂದುವರಿದಿರುವುದಾಗಿ ತಿಳಿಸಿದ ಅವರು, ತಾಜ್ ಹೋಟೆಲ್‌ನ ನೂತನ ಕಟ್ಟಡದಲ್ಲಿ ಎಲ್ಲವೂ ಸುವ್ಯವಸ್ಥಿತವಾಗಿದ್ದು, ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಆದರೆ ಇಬ್ಬರು ಉಗ್ರರು ತಾಜ್‌ನ ಹಳೇ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವುದಾಗಿ ಹೇಳಿದ್ದಾರೆ.
93 ಒತ್ತೆಯಾಳುಗಳ ಬಿಡುಗಡೆ: ಒಬೆರಾಯ್ ಹೋಟೆಲ್‌ನಲ್ಲಿ ಉಗ್ರರ ಸೆರೆಯಾಳಾಗಿದ್ದ ಸುಮಾರು 93ಮಂದಿ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಇದರಲ್ಲಿ ಬಹುತೇಕರು ವಿದೇಶಿಯರಾಗಿದ್ದಾರೆ.
ಲಗೇಜುಗಳೊಂದಿಗೆ ಕೆನಡಾದ ಧ್ವಜ ಹಿಡಿದು ಒಬೆರಾಯ್‌ನಿಂದ ಹೊರಬಂದ ಒತ್ತೆಯಾಳುಗಳು ಸುದ್ದಿಗಾರರೊಂದಿಗೆ ಮಾತನ್ನಾಡದೇ ಕಾರನ್ನು ಏರಿ ಹೊರಟಿದ್ದರು. ಹೊರ ಬಂದ ಗುಂಪಿನಲ್ಲಿ ಓರ್ವ ಪುಟ್ಟ ಮಗುವೊಂದನ್ನು ಎತ್ತಿಕೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
|