ಭಾರತದ ಮೇಲೆ ದಾಳಿ ಮಾಡುವ ಉಗ್ರರ ಮೇಲೆ ಪ್ರತಿದಾಳಿ ಮಾಡಲಾಗುವುದು. ಉಗ್ರರ ನಿಗ್ರಹಕ್ಕೆ ಕಠಿಣ ಕಾನೂನು ರಚಿಸಲಾಗುವುದು ಎಂದು ಪ್ರಧಾನಿ ಡಾ.ಮನಮೋಹನ್ ಸಿಂಗ್ ತಿಳಿಸಿದ್ದಾರೆ.
ಅಲ್ಲದೇ ಗಡಿ ಪ್ರದೇಶಗಳಲ್ಲಿ ರಕ್ಷಣೆ ಹೆಚ್ಚಿಸಲಾಗುವುದು ಮತ್ತು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದು ಹೇಳಿದ್ದಾರೆ. ತಮ್ಮ ನೆಲದಿಂದ ಉಗ್ರರು ಭಾರತದ ಮೇಲೆ ದಾಳಿ ನಡೆಸಲು ಅನುಕೂಲ ಮಾಡಿಕೊಡುವ ರಾಷ್ಟ್ರಗಳ ವಿರುದ್ಧ ಭಾರತ ಕ್ರಮ ಕೈಗೊಳ್ಳಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಹಲವಾರು ವರ್ಷಗಳಿಂದ ಬೇಡಿಕೆಯಲ್ಲಿರುವ ಕೇಂದ್ರೀಯ ಭಯೋತ್ಪಾದನಾ ನಿಗ್ರಹ ಪಡೆ ರಚಿಸುವ ಸುಳಿವನ್ನೂ ಅವರು ನೀಡಿದರು. ವೀಸಾ ನೀಡುವ ನಿಯಮಗಳನ್ನೂ ಕ್ಲಿಷ್ಟಗೊಳಿಸಲಾಗುವುದು. ಇದರಿಂದಾಗಿ ಉಗ್ರರು ಸುಲಭವಾಗಿ ಭಾರತ ಪ್ರವೇಶಿಸದಂತೆ ತಡೆಯಲಾಗುವುದು. ಉಗ್ರರು ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಭದ್ರತಾ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಡಾ.ಸಿಂಗ್ ಹೇಳಿದರು.
ಘಟನಾ ಸ್ಥಳಕ್ಕೆ ಪ್ರಧಾನಿ ಡಾ.ಮನಮೋಹನ್ ಸಿಂಗ್, ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್, ವಿರೋಧ ಪಕ್ಷದ ನಾಯಕ ಎಲ್.ಕೆ.ಆಡ್ವಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. |