ಮಹಾನಗರಿ ಮುಂಬೈಯಲ್ಲಿ ನಡೆದಿರುವ ಭಯೋತ್ಪಾದನಾ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಭಯೋತ್ಪಾದನೆಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ಅವರು ಶುಕ್ರವಾರ ಸ್ಫೋಟ ಕೃತ್ಯ ನಡೆದ ಒಬೆರಾಯ್, ಟ್ರೈಡೆಂಟ್ ಹೋಟೆಲುಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ, ಪ್ರತಿ ವರ್ಷ ಆಯೋಜಿಸುತ್ತಿರುವ ಮುಖ್ಯಮಂತ್ರಿಗಳ ಸಭೆಯಲ್ಲೂ, ಉಗ್ರರ ದಾಳಿಯನ್ನು ತಡೆಯುವಂತೆ ಪ್ರಧಾನಿಯವರಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರೂ ಕೂಡ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಈ ಮೊದಲೇ ಪ್ರಧಾನಿಯವರಿಗೆ ಮಾಹಿತಿ ನೀಡಲಾಗಿತ್ತು. ಗುಜರಾತ್ ಮೀನುಗಾರರನ್ನು ಪಾಕ್ ನೌಕಾ ಪಡೆಯ ಪೊಲೀಸರು ಸೆರೆ ಹಿಡಿದಿದ್ದು, ಅವರ ಬೋಟ್ ಅನ್ನು ಹಿಂತಿರುಗಿಸದೇ, ಅದೇ ಬೋಟ್ ಅನ್ನು ಉಗ್ರರು ವಾಣಿಜ್ಯ ನಗರಿ ಮೇಲೆ ದಾಳಿ ನಡೆಸುವ ಅಂಗವಾಗಿ ಬಳಸಿಕೊಂಡಿರುವುದಾಗಿ ಗಂಭೀರವಾಗಿ ದೂರಿದರು.
ಭಾರತ ಮೇಲೆ ಭಯೋತ್ಪಾದನಾ ದಾಳಿ ನಡೆಸುತ್ತಿರುವ ಕೃತ್ಯಕ್ಕೆ ಸಂಬಂಧಿಸಿದಂತೆ ಪಾಕ್ ಭೂ ಹಾಗೂ ಸಮುದ್ರ ಮಾರ್ಗವನ್ನು ಬಳಸಿಕೊಳ್ಳುವ ಮೂಲಕ ವಿಶ್ವಸಂಸ್ಥೆಯ ನೀತಿಯನ್ನು ಮುರಿಯುತ್ತಿರುವುದಾಗಿ ಅವರು ಹೇಳಿದರು.
ಆ ನಿಟ್ಟಿನಲ್ಲಿ ಭಾರತದ ಮೇಲೆ ಭಯೋತ್ಪಾದನಾ ದಾಳಿ ನಡೆಸಲು ಪ್ರಥಮ ಬಾರಿಗೆ ಪಾಕ್ ಸಮುದ್ರ ಮಾರ್ಗವನ್ನು ಬಳಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಯೋತ್ಪಾದಕರು ಅಮೆರಿಕ, ಬ್ರಿಟನ್ ಹಾಗೂ ಇಸ್ರೇಲ್ ಪ್ರಜೆಗಳನ್ನು ಗುರಿಯಾಗಿರಿಸಿಕೊಂಡು ಮುಂಬೈಯಲ್ಲಿ ದಾಳಿ ನಡೆಸಿರುವುದಾಗಿ ತಿಳಿಸಿದರು. |