ಮುಂಬೈ: ತಾಜ್ ಹೋಟೇಲಿನೊಳಗಡೆ ಅಡಗಿಕೊಂಡಿದ್ದ ಎಲ್ಲಾ ಉಗ್ರರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಎನ್ಎಸ್ಜಿ ಪ್ರಧಾನ ನಿರ್ದೇಶಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನರಿಮನ್ ಹೌಸ್ ಮತ್ತು ಒಬೇರಾಯ್ಗಳಲ್ಲಿನ ಯಶಸ್ವೀ ಕಾರ್ಯಚರಣೆಯ ಬಳಿಕ ತಾಜ್ ಎನ್ಎಸ್ಜಿಯ ಕಳವಳವಾಗಿತ್ತು. ಇಲ್ಲಿ ಎನ್ಎಸ್ಜಿಯು ಉಗ್ರರೊಂದಿಗೆ ಭಾರೀ ಗುಂಡಿನ ಕಾಳಗ ನಡೆಸಿದ್ದು, ಒಳಗಡೆ ಸೇರಿಕೊಂಡಿದ್ದ ಹಲವು ಅತಿಥಿಗಳನ್ನು ರಕ್ಷಿಸಿತ್ತು.
"ಉಗ್ರರು ತಮ್ಮ ಸ್ಥಾನಗಳನ್ನು ಬದಲಿಸುತ್ತಿರುವ ಕಾರಣ ನಾವೂ ಸಹ ನಮ್ಮ ಸ್ಥಳಗಳನ್ನು ಮತ್ತು ಯುಕ್ತಿ, ತಂತ್ರಗಳನ್ನು ಬದಲಿಸಬೇಕಾಯಿತು ಎಂದು ಪ್ರಧಾನ ನಿರ್ದೇಶಕ ಜೆ.ಕೆ.ದತ್ ಹೇಳಿದ್ದಾರೆ. ತಾಜ್ನಲ್ಲಿ ಇನ್ನೂ ಉಗ್ರರು ಅವಿತಿದ್ದಾರೆಯೇ ಎಂಬ ಪ್ರಶ್ನೆಗೆ ಅವರು ಈ ಮೇಲಿನಂತೆ ಉತ್ತರಿಸಿದ್ದಾರೆ.
ಅವೆರೆಲ್ಲ ಸಾವಿಗೀಡಾಗಿದ್ದಾರೆ ಎಂದಷ್ಟೆ ಹೇಳಿದ ಅವರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. |