ತಮ್ಮ ಹೀನಾತಿಹೀನ ಭಯೋತ್ಪಾದನಾ ಚಟುವಟಿಕೆಗಳಿಗೆ ಮುಂಬೈಯ ಸ್ಥಳೀಯರು ಸಹಾಯ ಮಾಡಿದ್ದಾರೆ ಎಂಬುದಾಗಿ ಹೇಳಿರುವ ಸೆರೆಸಿಕ್ಕ ಪಾಕಿಸ್ತಾನಿ ಪ್ರಜೆ ಅಜಂ ಅಮೀರ್ ಕಸಬ್, ಕನಿಷ್ಠ ಐದು ಮಂದಿಯ ಹೆಸರು ಮತ್ತು ವಿಳಾಸವನ್ನು ಹೊರಗೆಡಹಿದ್ದಾನೆ ಎಂದು ಮೂಲಗಳು ಹೇಳಿವೆ.
ಉಗ್ರರಿಗೆ ಆಶ್ರಯ ನೀಡುವುದು, ಅವರನ್ನು ಮುಂಬೈಯ ವಿವಿಧೆಡೆ ಕರೆದೊಯ್ದು ಸುತ್ತಾಡಿಸುವುದು, ಪೊಲೀಸ್ ಠಾಣೆಗಳು ಮತ್ತು ನಾಕಾಬಂಧಿಗಳ ಮಾಹಿತಿ ರವಾನಿಸುವುದು ಮುಂತಾದ ಸಹಾಯಗಳನ್ನು ಸ್ಥಳೀಯರು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ಏತನ್ಮಧ್ಯೆ, "ಸ್ಥಳೀಯರು ಸಹಾಯ ಮಾಡಿರಬಹುದೆಂಬುದಾಗಿ ನಾವು ಶಂಕಿಸುತ್ತೇವಾದರೂ, ಇದರ ತಪಾಸಣೆಯಾಗಬೇಕಿದೆ. ತನಿಖೆ ನಡೆಯುತ್ತಿರುವಾಗ ಈ ಕುರಿತು ಪ್ರತಿಕ್ರಿಯಿಸಲು ಇದೀಗ ಕಾಲ ಪಕ್ವವಾಗಿಲ್ಲ" ಎಂದು ಪೊಲೀಸ್ ಜಂಟಿ ಆಯುಕ್ತ ರಾಕೇಶ್ ಮಾರಿಯ ಹೇಳಿದ್ದಾರೆ.
ಪ್ಯಾಲೇಸ್ತೀನಿಯರ ಮೇಲೆ ನಡೆಸಲಾಗುತ್ತಿರುವ ದೌರ್ಜನ್ಯಕ್ಕೆ ಪ್ರತೀಕಾರ ಕೈಗೊಳ್ಳುವ ಸಲುವಾಗಿ ಅವರು ಇಸ್ರೇಲಿಗಳನ್ನು ಗುರಿಯಾಗಿಸಿ ದಾಳಿ ನಡೆಸಬೇಕು ಎಂಬುದಾಗಿ ಅವರನ್ನು ಕಳುಹಿಸಲಾಗಿದೆ ಎಂದು ಬಂಧಿತ ಉಗ್ರ ಕಸಬ್ ಹೇಳಿದ್ದಾನೆ. ಇದೇ ಕಾರಣಕ್ಕಾಗಿ ಅವರು ಇಸ್ರೇಲಿಗಳ ಸಂಕೀರ್ಣ ಎಂದೇ ಪರಿಗಣಿತವಾಗಿರುವ ನಾರಿಮನ್ ಹೌಸ್‌ಗೆ ದಾಳಿ ನಡೆಸಿದ್ದಾರೆ.
ಕಾರ್ಯಾಚರಣೆ ವೇಳೆ ಹತರಾಗಿರುವ ಕಸಬನ ಇತರ ಸ್ನೇಹಿತರು ನರೀಮನ್ ಹೌಸ್‌ನಲ್ಲಿ ಈ ಮೊದಲು ತಂಗಿದ್ದರು ಎಂದು ಮೂಲಗಳು ತಿಳಿಸಿವೆ. |