ಕೊನೆಗೂ ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಮುಂಬೈಯಲ್ಲಿ ಉಗ್ರರು ನಡೆಸಿರುವ ಭಯೋತ್ಪಾದನಾ ದಾಳಿಯ ಹಿನ್ನೆಲಯಲ್ಲಿ ನೈತಿಕ ಹೊಣೆ ಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ಪತ್ರವನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ರಾಷ್ಟ್ರದೆಲ್ಲೆಡೆ ನಡೆಯುತ್ತಿರುವ ಭಯೋತ್ಪಾದನಾ ದಾಳಿಗಳ ಹಿನ್ನೆಲೆಯಲ್ಲಿ ಸಚಿವ ಪಾಟೀಲ್ ತನ್ನ ದುರ್ಬಲ ನೀತಿಗಳಿಂದಾಗಿ ಎಲ್ಲೆಡೆಯಿಂದ ತೀವ್ರ ಟೀಕೆಗೆ ಒಳಗಾಗಿದ್ದರೂ, ಇದುವರೆಗೆ ತನ್ನ ಕುರ್ಚಿಗೆ ಅಂಟಿಕೊಂಡಿದ್ದರು. ಅತ್ಯಂತ ಅಸಮರ್ಥ ಗೃಹಸಚಿವ ಎಂಬ ಕುಖ್ಯಾತಿಗೆ ಒಳಗಾಗಿದ್ದ ಇವರು, ಕಾಂಗ್ರೆಸ್ ಅಧ್ಯಕ್ಷರ ಆಶೀರ್ವಾದ ಇರುವ ತನಕ ತಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂಬ ಸಾರ್ವಜನಿಕ ಹೇಳಿಕೆಯನ್ನೂ ನೀಡಿದ್ದರು.ಇದೀಗ ಭಾನುವಾರ ಮುಂಬೈ ಸ್ಫೋಟದ ಹಿನ್ನೆಲೆಯಲ್ಲಿ ಕರೆಯಲಾಗಿರುವ ಸರ್ವಪಕ್ಷ ಸಭೆಯಿಂದಲೂ ಅವರನ್ನು ಹೊರಗಿಡಲಾಗಿದ್ದು, ಬಳಿಕದ ಬೆಳವಣಿಗೆ ಎಂಬಂತೆ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಪ್ರತಿ ಹಿಂಸಾತ್ಮಕ ಘಟನೆಗಳು ಸಂಭವಿಸಿದಾಗಲೂ, ಒಬ್ಬ ಗೃಹಸಚಿವನ ಸ್ಥಾನದಲ್ಲಿದ್ದ ಪಾಟೀಲ್ ಅತ್ಯಂತ ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದು, ಸಾರ್ವಜನಿಕರ ಆಕ್ರೋಶ ಎದುರಿಸುತ್ತಿದ್ದರು.ಶೋಕಿವಾಲ ಎಂದು ಕರೆಸಿಕೊಂಡಿರುವ ಪಾಟೀಲ್, ಕಳೆದ ಅಹಮದಾಬಾದ್ ಸ್ಫೋಟ ವೇಳೆ ಒಂದೇ ದಿನದಲ್ಲಿ ನಾಲ್ಕು ಬಾರಿ ಉಡುಪು ಬದಲಿಸಿ ಸೂಟುಬೂಟುಗಳಲ್ಲಿ ಮಿಂಚುತ್ತಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಮಾಧ್ಯಮಗಳ ಟೀಕೆಗೆ ಆಹಾರವಾಗಿದ್ದರು.ರಾಜೀನಾಮೆ ಅಧಿಕೃವಾಗಿ ಸ್ವೀಕೃತವಾಗಿಲ್ಲ ಪಾಟೀಲರ ರಾಜೀನಾಮೆಯನ್ನು ಸ್ವೀಕರಿಸಲಾಗಿಲ್ಲ ಎಂದು ಪ್ರಧಾನಿ ಕಚೇರಿ ಮೂಲಗಳು ಹೇಳಿವೆ. ರಾಷ್ಟ್ರಪತಿಗಳು ಅಂಗೀಕರಿಸಿದ ಬಳಿಕವಷ್ಟೆ ರಾಜೀನಾಮೆ ಅಧಿಕೃತವೆಂದಾಗುತ್ತದೆ.ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ) ಸಭೆಯಲ್ಲಿ ಪಾಟೀಲ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ ಮುಖ್ ಅವರುಗಳು ದಾಳಿಯನ್ನು ತಡೆಯಲು ವಿಫಲರಾಗಿದ್ದಾರೆ ಎಂಬುದಾಗಿ ತೀವ್ರ ಅಸಮಾಧಾನ ಮತ್ತು ಟೀಕೆಗಳು ವ್ಯಕ್ತವಾಗಿದ್ದವು.ಅಲ್ಲದೆ, ಪಾಟೀಲ್ ಅವರು ಸಿಡಬ್ಲ್ಯುಸಿಯ ಯಾವುದೇ ನಿರ್ಧಾರಕ್ಕೂ ತಲೆಬಾಗುವುದಾಗಿ ಹೇಳಿದ್ದರೆನ್ನಲಾಗಿದೆ.ಇದಲ್ಲದೆ, ಪ್ರಧಾನಿ ಮನಮೋಹನ್ ಸಿಂಗ್ ಅವರು ಶನಿವಾರ ಸೇನೆಯ ಮತ್ತು ಗೃಹಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ನಡೆಸಿದ್ದ ಸಭೆಗೆ ಪಾಟೀಲರಿಗೆ ಆಹ್ವಾನಿಸದಿದ್ದುದು ಪಾಟೀಲರಿಗೆ ಇನ್ನೊಂದು ಮುಖಭಂಗವಾಗಿತ್ತು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆಸಿರುವ ಸಭೆಯಲ್ಲಿ ಪ್ರಧಾನಿಯವರು, ರಕ್ಷಣಾ ಸಚಿವ ಎ.ಕೆ. ಆಂಟನಿ ಹಾಗೂ ಸೇನಾಧಿಕಾರಿಗಳು ಮತ್ತು ಗುಪ್ತಚರ ಇಲಾಖೆಯ ಅಧಿಕಾರಿಗಳೊಂದಿಗೆ, ಇಂತಹ ಭಯೋತ್ಪಾದನಾ ಕೃತ್ಯಗಳನ್ನು ತಡೆಯಲು ಕ್ರಮಕೈಗೊಳ್ಳುವ ಕುರಿತು ಚರ್ಚೆ ನಡೆಸಿದ್ದರು ಎಂದು ಸರ್ಕಾರಿ ಮೂಲಗಳು ವರದಿಗಾರರಿಗೆ ತಿಳಿಸಿವೆ. |