ಭಯೋತ್ಪಾದಕರ ಮುಂಬೈದಾಳಿಯು ಕೇಂದ್ರ ಮಂತ್ರಿಮಂಡಲದಲ್ಲಿ 'ಸ್ಫೋಟ'ಗೊಂಡಿದ್ದು, ಗೃಹಸಚಿವ ಶಿವರಾಜ್ ಪಾಟೀಲ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನ ವಿತ್ತ ಸಚಿವ ಪಿ.ಚಿದಂಬರಂ ಅವರಿಗೆ ವಹಿಸಲಾಗಿದೆ. ಚಿದಂಬರಂ ವಶದಲ್ಲಿದ್ದ ವಿತ್ತ ಖಾತೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದಾರೆ.ಪಾಟೀಲ್ ಅವರು ರಾಜೀನಾಮೆ ಸಲ್ಲಿಸುತ್ತಿರುವಂತೆ, ಗೃಹಖಾತೆ ಜವಾಬ್ದಾರಿ ವಹಿಸಿಕೊಳ್ಳಲು ದೊಡ್ಡ ದಂಡೇ ಮುಂದಾಗಿತ್ತು. ಪ್ರಣಬ್ ಮುಖರ್ಜಿ ಸೇರಿದಂತೆ ಹಲವರ ಹೆಸರುಗಳು ತೇಲಿಬಂದಿದ್ದವು.ರಾಜೀವ್ ಗಾಂಧಿ ಸಂಪುಟದಲ್ಲಿ ಗೃಹಇಲಾಖೆಯಡಿಯಲ್ಲಿ ಆಂತರಿಕ ಭದ್ರತಾ ರಾಜ್ಯ ಸಚಿವರಾಗಿದ್ದ ಚಿದಂಬರಂ ಭಾನುವಾರ ಮುಂಜಾನೆ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಮುಂಬೈ ದಾಳಿ ಹಿನ್ನಲೆಯಲ್ಲಿ ಪರಿಸ್ಥಿತಿಯ ಅವಲೋಕನ ನಡೆಸಲಾಗಿದ್ದು, 'ಮಾಜಿ' ಗೃಹಸಚಿವ ಪಾಟೀಲ್ ತೀವ್ರ ಒತ್ತಡಕ್ಕೀಡಾಗಿದ್ದರು.ಕಳೆದ ರಾತ್ರಿ ನಡೆಸಲಾಗಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಚಿದಂಬರಂ ಅವರು ವಿಶೇಷ ಆಹ್ವಾನಿತರಾಗಿದ್ದರು. ಅಲ್ಲದೆ ಪ್ರಧಾನಿ ಕರೆದಿರುವ ಸರ್ವಪಕ್ಷಗಳ ಸಭೆಗೂ ಅವರಿಗೆ ಆಹ್ವಾನ ನೀಡಲಾಗಿದೆ. |