ಉಗ್ರರು ಮುಂಬೈ ಮಹಾನಗರಿಯಲ್ಲಿ ಮನಸೋಇಚ್ಚೆ ಅಟ್ಟಹಾಸ ಮೆರೆದಿರುವ ಬಳಿಕ ಭದ್ರತಾ ವೈಫಲ್ಯ ಕುರಿತು ಕೇಂದ್ರಸರಕಾರ ತೀವ್ರ ಮುಜುಗರ ಎದುರಿಸುತ್ತಿದ್ದು, ಗೃಹಸಚಿವ ಶಿವರಾಜ್ ಪಾಟೀಲ್ ರಾಜೀನಾಮೆ ನೀಡಿರುವ ಬೆನ್ನಿಗೆ ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ.ನಾರಾಯಣನ್ ಅವರೂ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಾದರೂ, ಪ್ರಧಾನಿಯವರು ಅವರ ರಾಜೀನಾಮೆ ಸ್ವೀಕರಿಸಿಲ್ಲ. ಎಂಕೆಎನ್ ಅವರಿಗೆ ಮುಂದುವರಿಯುವಂತೆ ಸೂಚಿಸಲಾಗಿದೆ.
ಗೃಹಸಚಿವರ ರಾಜೀನಾಮೆಯನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸ್ವೀಕರಿಸುವ ವಿಚಾರ ಹೊರಬೀಳುತ್ತಿರುವಂತೆ ಎಂಕೆಎನ್ ಅವರೂ ರಾಜೀನಾಮೆ ಸಲ್ಲಿಸಿದ್ದಾರೆ. ಇದಕ್ಕೂ ಮುಂಚಿತವಾಗಿ ಅವರು ಪ್ರಧಾನಿಯೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಆದರೆ ಅವರ ರಾಜೀನಾಮೆಯನ್ನು ಸ್ವೀಕರಿಸಲಾಗಿಲ್ಲ ಎಂದು ಮೂಲಗಳು ಹೇಳಿವೆ.
ಎಲ್ಲೆಡೆಗಳಿಂದ ಭಾರೀ ಒತ್ತಡ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಶಿವರಾಜ್ ಪಾಟೀಲ್ ಮತ್ತು ಎಂಕೆಎನ್ ಅವರಿಗೆ ಸ್ಥಾನ ತೆರವು ಮಾಡದೇ ಇನ್ಯಾವುದೇ ಪರ್ಯಾಯವಿಲ್ಲ ಎಂದು ವ್ಯಾಖ್ಯಾನಿಸಲಾಗಿತ್ತು.
ದೇಶ್‌ಮುಖ್ ಮೇಲೂ ಒತ್ತಡ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಅವರೂ ಸ್ಥಾನ ತೊರೆಯಬೇಕು ಎಂಬ ಒತ್ತಾಯವನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಮುಂದಿನ ಸರದಿ ದೇಶ್‌ಮುಖ್ ಅವರದ್ದೇ? ಎಂಬ ಪ್ರಶ್ನೆಗಳು ಉದ್ಭವವಾಗಿವೆ.
ಅವರ ಸ್ಥಾನಕ್ಕೆ ಪೃಥ್ವಿರಾಜ್ ಚೌವ್ಹಾಣ್ ಅವರನ್ನು ತರಲಾಗುವುದು ಎಂಬ ವದಂತಿಗಳೂ ಹಬ್ಬಿವೆ. ಆದರೆ, ತಾನು ಸ್ಥಾನ ತೊರೆಯುವ ಮಾತೇ ಇಲ್ಲ ಎನ್ನುತ್ತಿರುವ ದೇಶ್‌ಮುಖ್, ತಾನು ರಾಜೀನಾಮೆ ನೀಡಲು ಕಾರಣವಿಲ್ಲ ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಆರ್.ಆರ್.ಪಾಟೀಲ್ 'ಇದೊಂದು ಸಣ್ಣ ಘಟನೆ' ಎಂಬ ಅಚಾತುರ್ಯದ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಬಲಿಯಾಗಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಆರ್.ಆರ್.ಪಾಟೀಲ್ ಅವರೂ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಬದಲಿಗೆ ತಾನ್ಯಾಕೆ ರಾಜೀನಾಮೆ ನೀಡಬೇಕು? ಗುಜರಾತಿನಲ್ಲಿ ಅಕ್ಷರಧಾಮದ ಮೇಲೆ ದಾಳಿ ನಡೆದ ವೇಳೆ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಯಾಕೆ ರಾಜೀನಾಮೆ ನೀಡಿಲ್ಲ ಎಂಬ ಮರುಪ್ರಶ್ನೆ ಎಸೆದಿದ್ದಾರೆ.
ತೂಗುಗತ್ತಿ ಇದಲ್ಲದೆ, ಇಂಟಲಿಜೆನ್ಸ್ ಬ್ಯೂರೋ ಮುಖ್ಯಸ್ಥ ಪಿ.ಸಿ.ಹಲ್ದಾರ್, ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಮತ್ತು ಇತರ ಕೆಲವು ಹಿರಿಯ ಅಧಿಕಾರಿಗಳ ತಲೆಯ ಮೇಲೂ ತೂಗುಗತ್ತಿ ನೇತಾಡುತ್ತಿದೆ.
|