ಮುಂಬೈಯಲ್ಲಿ ಉಗ್ರರು ನಡೆಸಿರುವ ಹೇಷಾರವದ ಹಿನ್ನೆಲೆಯಲ್ಲಿ ರಾಜಕೀಯ ತಲೆಗಳು ಉರುಳುವ ಪ್ರಕ್ರಿಯೆ ಮುಂದುವರಿದಿದ್ದು, ಮಹಾರಾಷ್ಟ್ರ ಉಪಮುಖ್ಯ ಮಂತ್ರಿ ಆರ್.ಆರ್. ಪಾಟೀಲ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಮುಂದಿನ ಸರದಿ ಮುಖ್ಯಮಂತ್ರಿ ದೇಶ್‌ಮುಖ್ ಅವರದ್ದೇ ಎಂಬ ಪ್ರಶ್ನಾರ್ಥಕ ಚಿನ್ನೆ ಉದ್ಭವಿಸಿದೆ.
ಮುಂಬೈಯಲ್ಲಿ ರಾಷ್ಟ್ರ ಹಿಂದೆಂದೂ ಕಂಡರಿಯ ರೀತಿಯಲ್ಲಿ ಉಗ್ರರು ನಡೆಸಿರುವ ಭೀಕರ ಭಯೋತ್ಪಾದನಾ ಕೃತ್ಯದ ಕುರಿತು 'ಇದೊಂದು ಸಣ್ಣ ಘಟನೆ' ಎಂಬ ವಿವಾದಾಸ್ಪದ ಹೇಳಿಕೆ ನೀಡಿದ್ದ, ಪಾಟೀಲ್ ತಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಭಾನುವಾರ ಹೇಳಿದ್ದರು.
ಆದರೆ ಸೋಮವಾರ ಅವರು ತನ್ನ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಅವರಿಗೆ ಸಲ್ಲಿಸಿದ್ದಾರೆ. ಆದರೆ ದೇಶ್‌ಮುಖ್ ಅವರು ಇನ್ನೂ ರಾಜೀನಾಮೆಯನ್ನು ಸ್ವೀಕರಿಸಿಲ್ಲ. ನ್ಯಾಶನಲಿಷ್ಟ್ ಕಾಂಗ್ರೆಸ್ ಪಕ್ಷ(ಎನ್‌ಸಿಪಿ) ಪಕ್ಷದ ಸಭೆಯ ಬಳಿಕ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ತನ್ನ ಆತ್ಮದ ಕರೆಗೋ ಓಗೊಟ್ಟು ಈ ಕ್ರಮ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ. ಏತನ್ಮಧ್ಯೆ, ರಾಜೀನಾಮೆ ಪತ್ರವನ್ನು ಸ್ವೀಕರಿಸುವಂತೆ ಎನ್‌ಸಿಪಿ ಮುಖಂಡ ಶರದ್ ಪವಾರ್ ಅವರು ದೇಶ್‌ಮುಖ್ ಅವರಿಗೆ ಸೂಚಿಸಿದ್ದಾರೆ.
ಇದರೊಂದಿಗೆ ಸ್ಥಾನ ತೊರೆಯುವಂತೆ ಮುಖ್ಯಮಂತ್ರಿ ದೇಶ್‌ಮುಖ್ ಅವರೂ ಕಾಂಗ್ರೆಸ್ ಪಕ್ಷದ ಒತ್ತಡಕ್ಕೊಳಗಾಗಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿವೆ.
ಕೇಂದ್ರ ಗೃಹಸಚಿವರಾಗಿದ್ದ ಶಿವರಾಜ್ ಪಾಟೀಲ್ ಅವರು ಭಾನುವಾರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಸ್ಥಾನವನ್ನು ವಿತ್ತ ಸಚಿವರಾಗಿದ್ದ ಚಿದಂಬಂರಂ ಅವರಿಗೆ ವಹಿಸಲಾಗಿದೆ.
ನೈತಿಕ ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ.ನಾರಾಯಣನ್ ಅವರೂ ಸಹ ರಾಜೀನಾಮೆ ನೀಡಿದ್ದರೂ, ಅವರ ರಾಜೀನಾಮೆಯನ್ನು ಸ್ವೀಕರಿಸದ ಪ್ರಧಾನಿ ಮನಮೋಹನ್ ಸಿಂಗ್, ತನ್ನ ಸ್ಥಾನದಲ್ಲಿ ಮುಂದುವರಿಯುವಂತೆ ಸೂಚಿಸಿದ್ದಾರೆ. |