ನವದೆಹಲಿ: ಭಾನುವಾರ ರಾತ್ರಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ, ಉಗ್ರವಾದದ ವಿರುದ್ಧ ಹೋರಾಡಲು ಎಲ್ಲಾ ಪಕ್ಷಗಳೂ ಅವಿರೋಧವಾಗಿ ಸಮ್ಮತಿ ಸೂಚಿಸಿವೆಯಾದರೂ, ವಿಸ್ತರಿತವಾದ ಒಮ್ಮತದ ಅಭಿಪ್ರಾಯ ಒಂದನ್ನು ತಲುಪುವಲ್ಲಿ ವಿಫಲವಾಗಿದೆ.
ಉಗ್ರವಾದವನ್ನು ಹತ್ತಿಕ್ಕಲು ಕೇಂದ್ರೀಯ ತನಿಖಾ ಏಜೆನ್ಸಿ(ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ)ಯ ಸ್ಥಾಪನೆ ಸೇರಿದಂತೆ ಅವಶ್ಯ ಕ್ರಮಗಳನ್ನು ಕೈಗೊಳ್ಳಲು, ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಪಕ್ಷಗಳು ಒಪ್ಪಿಗೆ ಸೂಚಿಸಿವೆ.
ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಒಂದು ವಿಶಾಲವಾದ ಒಪ್ಪಿಗೆಯನ್ನು ಮೂಡಿಸಲು ಪ್ರಯತ್ನಿಸುತ್ತಿದ್ದರೂ, ಒಮ್ಮತ ಮೂಡಿಸುವ ಪ್ರಯತ್ನ ಫಲ ನೀಡಿಲ್ಲ.
"ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಹೊತ್ತಿನಲ್ಲಿ ರಾಜಕೀಯಾತೀತವಾಗಿ ನಾವು ಒಟ್ಟಾಗಿ ನಿಲ್ಲುತ್ತೇವೆ ಎಂಬ ಒಕ್ಕೊರಲ ಭರವಸೆಯನ್ನು ನೀಡಲು ಸರ್ವಪಕ್ಷಗಳ ಕೊನೆಯಲ್ಲಿ ನಾವು ಶಕ್ತವಾಗಿದ್ದೇವೆ" ಎಂದು ಸಿಂಗ್ ಐದು ಗಂಟೆಗಳ ಸುದೀರ್ಘ ಕಾಲ ನಡೆದ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಭಯೋತ್ಪಾದನೆಯ ವಿರುದ್ಧ ಯುದ್ಧ ಸಾರಲು ತನ್ನ ಪಕ್ಷವು ನೀಲಿನಕಾಶೆಯೊಂದನ್ನು ರೂಪಿಸಿ ಅದರ ಪ್ರಕಾರ ನಡೆದುಕೊಳ್ಳಲಿದೆ ಎಂಬ ಭರವಸೆಯನ್ನೂ ಪ್ರಧಾನಿಯವರು ಸಭೆಯಲ್ಲಿ ಭಾಗವಹಿಸಿದ್ದ ಇತರ ಪಕ್ಷಗಳ ಹಿರಿಯ ನಾಯಕರಿಗೆ ನೀಡಿದ್ದಾರೆ.
ಕಠಿಣ ಕಾನೂನಿನ ಜಾರಿಗೆ ಒತ್ತಾಯಿಸಿದ ಬಿಜೆಪಿ ಮತ್ತು ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಅವರುಗಳು ಪೋಟಾ ಕಾಯ್ದೆಯ ಹಿಂತೆಗೆತಕ್ಕೆ ಪ್ರತಿಭಟನೆ ವ್ಯಕ್ತಪಡಿಸಿದರು. ಭಯೋತ್ಪಾನೆಯನ್ನು ತಡೆಯಲು ಸರಕಾರದ ವೈಫಲ್ಯವನ್ನು ಬಿಜೆಪಿ ಕಟುವಾಗಿ ಟೀಕಿಸಿತು.
ಈ ಮಧ್ಯೆ, ತಕ್ಷಣ ಸಂಸತ್ ಅಧಿವೇಶನವನ್ನು ಕರೆಯಬೇಕು ಎಂದು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ವಿ.ಕೆ.ಮಲ್ಹೋತ್ರ ಒತ್ತಾಯಿಸಿದ್ದಾರೆ.
ಸಮಾಜವಾದಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮುಂಬೈ ದಾಳಿಯ ಬಳಿಕ ಸರ್ಕಾರದ ಮೇಲಿನ ವಿಶ್ವಾಸ ನಶಿಸಿದ್ದು, ಸರ್ಕಾರವು 15 ದಿನಗಳೊಳಗಾಗಿ ರಚನಾತ್ಮಕ ಯೋಜನೆಯನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಭೆಯಲ್ಲಿ ಪಾಲ್ಗೊಂಡಿರುವ ಎಡರಂಗವು ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ.ನಾರಾಯಣನ್ ಅವರನ್ನು ಕಿತ್ತುಹಾಕಬೇಕು ಎಂದು ಒತ್ತಾಯಿಸಿದೆ. ತೆಲುಗುದೇಶಂ ದಾಳಿಯನ್ನು ಸೂಕ್ತವಾಗಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿತು.
ಗೃಹಖಾತೆಯನ್ನು ವಹಿಸಿಕೊಂಡ ಬಳಿಕ ಚಿದಂಬರಂ ಅವರಿಗೆ ಇದು ಪ್ರಥಮ ಸಭೆಯಾಗಿದ್ದು, ಸರ್ಕಾರದ ಸ್ಥಿತಿಗತಿಗಳು ಮತ್ತು ಭವಿಷ್ಯದ ಯೋಜನೆಗಳನ್ನು ವಿವರಿಸಲು ಸಿಕ್ಕ ವೇದಿಕೆಯನ್ನು ಸೂಕ್ತವಾಗಿ ಬಳಸಿಕೊಂಡರು. |