ವಿಶ್ವದಲ್ಲಿ ಮಹಾಮಾರಿಯಾಗಿ ಪರಿಣಮಿಸಿರುವ ಹೆಚ್‌ಐವಿ-ಏಡ್ಸ್ ಸಮಸ್ಯೆ ಮನುಕುಲಕ್ಕೆ ಕಂಟಕವಾಗಿದ್ದು, ಆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂದು(ಸೋಮವಾರ) ದೇಶಾದ್ಯಂತ ವಿಶ್ವ ಏಡ್ಸ್ ದಿನ ಆಚರಿಸಲಾಯಿತು.
ವಿಶ್ವ ಏಡ್ಸ್ ದಿನದ ಅಂಗವಾಗಿ ದೇಶಾದ್ಯಂತ ಹಲವಾರು ಸಂಘ-ಸಂಸ್ಥೆಗಳು ಏಡ್ಸ್ ಮಹಾಮಾರಿ ವಿರುದ್ಧದ ಘೋಷಣಾ ಫಲಕದೊಂದಿಗೆ ರಾಲಿ ನಡೆಸಿದರು.
ದೇಶದ ಪ್ರಗತಿಗೆ ಮಾರಕವಾಗಿರುವ ಏಡ್ಸ್ ಕುರಿತು, ತಿಳಿವಳಿಕೆ, ಮಾಹಿತಿ ನೀಡುತ್ತಿದ್ದರೂ ಕೂಡ, ಜನರಲ್ಲಿ ಇನ್ನೂ ಜಾಗೃತಿ ಮೂಡಿಲ್ಲದ ಪರಿಣಾಮ, ಹೆಚ್‌ಐವಿ-ಏಡ್ಸ್ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದೆ.
ವಿಶ್ವದಾದ್ಯಂತ ಪ್ರತಿದಿನ ಏಳು ಸಾವಿರಕ್ಕೂ ಅಧಿಕ ಹೆಚ್ಐವಿ ಸೋಂಕಿತರು ಸೇರ್ಪಡೆಯಾಗುತ್ತಿದ್ದಾರೆ. ಈಗಾಗಲೇ 220ಲಕ್ಷ ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿಯೂ ಪುರುಷ ಮತ್ತು ಮಹಿಳೆಯರಿಗೆ ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 25ಲಕ್ಷ ಜನರು ಹೆಚ್‌ಐವಿ ಪೀಡಿತರಾಗಿದ್ದಾರೆ.
ಅಲ್ಲದೇ ಈಗಲೂ ಹೆಚ್ಚಿನವರಲ್ಲಿ ಹೆಚ್‌ಐವಿ ಹಾಗೂ ಏಡ್ಸ್ ನಡುವಿನ ವ್ಯತ್ಯಾಸ ತಿಳಿದಿಲ್ಲ. ಹೆಚ್‌ಐವಿ ಎಂಬುದು ರೋಗಾಣುವಿನ ಹೆಸರು, ಅದು ಮನುಷ್ಯನ ದೇಹದಲ್ಲಿ ಸೇರಿದ್ದರೆ, ದೇಹದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ, ಆದರೆ ದೇಹಲದಲ್ಲಿ ತೂಕ ಇಳಿಯುವುದು, ನಿರಂತರ ಕೆಮ್ಮು ಇದ್ದರೆ ಅದನ್ನು ಏಡ್ಸ್ ಎನ್ನುತ್ತಾರೆ. ಹೆಚ್‌ಐವಿಯ ಕೊನೆಯ ಹಂತವೇ ಏಡ್ಸ್ ಆಗಿದೆ.
ಆ ಕಾರಣಕ್ಕಾಗಿಯೇ ಹೆಚ್ಐವಿ-ಏಡ್ಸ್ ಕುರಿತು ಜನಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಡಿಸೆಂಬರ್ 1ನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. |