ಮುಂಬೈ ದಾಳಿ ಪ್ರಕರಣದಲ್ಲಿ ಬಿಜೆಪಿಯು ರಾಜಕೀಯವಾಡುತ್ತಿದೆ ಎಂದು ದೂರಿರುವ ಉತ್ತರಪ್ರದೇಶ ಕಾಂಗ್ರೆಸ್, ಗುಜರಾತ್ ಹಾದಿಯಾಗಿ ಬಂದಿರುವ ಉಗ್ರರರನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಹ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ.
"ರಾಷ್ಟ್ರದಲ್ಲಿ ಒಗ್ಗಟ್ಟಿನ ಅಗತ್ಯವಿರುವ ಈ ಸಮಯದಲ್ಲಿ ಬಿಜೆಪಿಯು ಭಯೋತ್ಪಾದನಾ ದಾಳಿಯ ಕುರಿತು ಬಿಜೆಪಿ ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ. ವಿಧಾನಸಭಾ ಚುನಾವಣೆಗಳು ಮತ್ತು ನಂತರದ ಪ್ರಧಾನ ಚುನಾವಣೆಯಲ್ಲಿ ಅಧಿಕಾರ ಹಿಡಿಯುವದು ಅದರ ಏಕಮಾತ್ರ ಗುರಿಯಾಗಿದೆ" ಎಂದು ಉತ್ತರಪ್ರದೇಶ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಪ್ರಮೋದ್ ತಿವಾರಿ ಹೇಳಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು "ಸ್ಫೋಟದ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಗೃಹಸಚಿವ ಶಿವರಾಜ್ ಪಾಟೀಲ್ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿಗಳು ರಾಜೀನಾಮೆ ನೀಡಿದ್ದಾರೆ. ಪ್ರಧಾನ ಮಂತ್ರಿಗಳ ರಾಜೀನಾಮೆ ಕೇಳುವ ನೈತಿಕ ಹಕ್ಕು ಬಿಜೆಪಿಗಿಲ್ಲ" ಎಂದು ಹೇಳಿದ ಅವರು, ಈ ಹಿಂದೆ ಕಂದಹಾರ್ ವಿಮಾನ ಅಪಹರಣ ಪ್ರಕರಣ ಹಾಗೂ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ರಾಜೀನಾಮೆ ನೀಡಲು ಅವರಿಗೆ ಧೈರ್ಯವಿರಲಿಲ್ಲ ಎಂದು ಅವರು ಟೀಕಿಸಿದ್ದಾರೆ.
ಉಗ್ರರ ದಾಳಿಯನ್ನು ತಡೆಯುವ ವೈಫಲ್ಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಂತೆ ಗುಜರಾತ್ ಮುಖ್ಯಮಂತ್ರಿಯೂ ಸಮಾನ ಜವಾಬ್ದಾರರು. ಉಗ್ರರು ಗುಜರಾತಿನಿಂದ ಬಂದಿರುವುದು ಗುಜರಾತ್ ಮುಖ್ಯಮಂತ್ರಿಯೂ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲು ಸೂಕ್ತ ಕಾರಣವೇ ಆಗಿದೆ ಎಂದು ತಿವಾರಿ ಹೇಳಿದ್ದಾರೆ.
ಮುಂಬೈ ದಾಳಿಯನ್ನು ಖಂಡಿಸಿದ ಅವರು ಗುಪ್ತಚರ ಇಲಾಖೆಯ ವೈಫಲ್ಯವನ್ನು ಒಪ್ಪಿಕೊಂಡರು. ಉಗ್ರವಾದ ನಿಗ್ರಹಕ್ಕೆ ಕಠಿಣ ಕಾನೂನು ರೂಪಿಸಲು ಮತ್ತು ಗುಪ್ತಚರ ಜಾಲವನ್ನು ಬಲಗೊಳಿಸಲು ಇದು ಸಕಾಲ ಎಂದು ನುಡಿದರು. |