ಮುಂಬೈಯಲ್ಲಿ ಭಯೋತ್ಪಾದಕರು ನಡೆಸಿರುವ ದಾಳಿಯ ಹಿಂದೆ ಪಾಕಿಸ್ತಾದ ಕೈವಾಡವು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿರುವಂತೆ, ಪಾಕಿಸ್ತಾನದ ಹೈಕಮಿಷನರ್ ಶಾಹಿದ್ ಮಲ್ಲಿಕ್ ಅವರನ್ನು ಕರೆಸಿರುವ ಸರ್ಕಾರ ತನ್ನ ಪ್ರತಿಭಟನೆ ವ್ಯಕ್ತಪಡಿಸಿದೆ.
ಜೀವಂತ ಸೆರೆ ಸಿಕ್ಕಿರುವ ಉಗ್ರ ನೀಡಿರುವ ಹೇಳಿಕೆಗಳು, ಡೆಕ್ಕನ್ ಮುಜಾಹಿದೀನ್ ಸಂಘಟನೆಯು ಕಳುಹಿಸಿರುವ ಇಮೇಲ್ ಎಲ್ಲವೂ ಪಾಕಿಸ್ತಾನದ ಕೈವಾಡವನ್ನು ಸಾಬೀತು ಪಡಿಸಿವೆ. ಈ ಮಧ್ಯೆ 1993ರ ಮುಂಬೈ ಸ್ಫೋಟದ ರೂವಾರಿ, ಪಾಕಿಸ್ತಾನದಲ್ಲಿ ನೆಲೆಯೂರಿರುವ ದಾವೂದ್ ಇಬ್ರಾಹಿಂನನ್ನು ವಶಕ್ಕೊಪ್ಪಿಸಬೇಕು ಎಂದು ಭಾರತ ಒತ್ತಾಯಿಸಿದೆ.
ಪಾಕಿಸ್ತಾನದ ಕರಾಚಿಯಿಂದ ಸಮುದ್ರ ಮಾರ್ಗದಲ್ಲಿ ಬಂದಿರುವ ಉಗ್ರರು ಮುಂಬೈ ತಲುಪಿರುವ ವಿವರಗಳು ಪ್ರಾಥಮಿಕ ತನಿಖೆಯಲ್ಲೇ ಗೊತ್ತಾಗಿದೆ. ಈ ದುಷ್ಕರ್ಮಿಗಳಿಗೆ ಮುಂಬೈಯ ಕೊಲಬಾದಲ್ಲಿರುವ ವ್ಯಾಪಾರಿಯೊಬ್ಬಾತ ನೆರವು ನೀಡಿದ್ದಾನೆ ಎಂಬ ಅಂಶವೂ ಬೆಳಕಿಗೆ ಬಂದಿದ್ದು, ಈತ ದಾವೂದ್ ಇಬ್ರಾಹಿಂನ ನಿಕಟವರ್ತಿ ಎನ್ನಲಾಗಿದೆ. ಸ್ಫೋಟ ತನಿಖೆಯ ವೇಳೆ ಉಗ್ರರಿಗೆ ದಾವೂದ್ ಸಹಾಯಹಸ್ತ ನೀಡಿರುವ ಅಂಶ ದೃಢವಾಗುತ್ತಿರುವಂತೆಯೇ, ದಾವೂದ್‌ನನ್ನು ತನ್ನ ವಶಕ್ಕೆ ನೀಡಬೇಕು ಎಂದು ಭಾರತವು ಪಾಕಿಸ್ತಾನ ಸರ್ಕಾರವನ್ನು ಸೋಮವಾರ ವಿನಂತಿಸಿದೆ.
ವಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ ಅವರೂ, ದಾವೂದ್‌ನನ್ನು ಭಾರತದ ವಶಕ್ಕೆ ಪಡೆಯಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರ ಮೇಲೆ ಒತ್ತಡ ಹೇಳಿದ್ದಾರೆ.
ದೆಹಲಿಯ ರಾಜತಾಂತ್ರಿಕ ವಲಯದಲ್ಲಿ ಚಟುವಟಿಕೆಗಳು ಹೆಚ್ಚಾಗಿದ್ದು, ಸರ್ಕಾರ ನೀಡಿರುವ ಬುಲಾವ್ ಮೇಲೆ ಪಾಕ್ ಹೈಕಮಿಷನರ್ ಶಾಹೀದ್ ಮಲ್ಲಿಕ್ ಅವರು ಸೋಮವಾರ ರಾತ್ರಿ ಭಾರತದ ವಿದೇಶಾಂಗ ಇಲಾಖೆಯ ವಿಶೇಷ ಕಾರ್ಯದರ್ಶಿ ವಿವೇಕ್ ಕಟ್ಜು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭ ಬಂಧಿತ ಉಗ್ರ ನೀಡಿರುವ ಮಾಹಿತಿಯಲ್ಲಿ, ದಾಳಿಯಲ್ಲಿ ಪಾಲ್ಗೊಂಡಿರುವ ಎಲ್ಲಾ ಉಗ್ರರು ಪಾಕಿಸ್ತನಾದಲ್ಲಿಯೇ ಒಂದು ವರ್ಷದಿಂದ ತರಬೇತಿ ಪಡೆದಿದ್ದಾರೆ ಮತ್ತು ಇವರಿಗೆಲ್ಲ ಪಾಕಿಸ್ತಾನದ ಸೇನಾನಿಯೋರ್ವ ತರಬೇತಿ ನೀಡಿದ್ದು, ಲಷ್ಕರ್-ಇ-ತೋಯ್ಬಾ ಸಂಘಟನೆ ಈ ದಾಳಿಯನ್ನು ಆಯೋಜಿಸಿದೆ ಎಂಬ ಅಂಶಗಳು ಬೆಳಕಿಗೆ ಬಂದಿವೆ.
|