ಮೇಜರ್ ಸಂದೀಪ್ ತಂದೆ ಉನ್ನಿಕೃಷ್ಣನ್ ಅವರು ಮಾನಸಿಕ ಸ್ಥಿಮಿತ ಕಳೆದು ಕೊಂಡಿದ್ದಾರೆ ಎಂದು ಸಿಪಿಐ ನಾಯಕ ಅತುಲ್ ಅಂಜನ್ ಹೇಳಿದ್ದಾರೆ. ಕೇರಳಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರು ಮೇಜರ್ ಸಂದೀಪ್ ಅವರ ಕುಟುಂಬದ ಕುರಿತು ಅವಹೇಳನಕಾರಿ ಮಾತುಗಳನ್ನಾಡಿರುವ ಒಂದು ದಿನದ ಬಳಿಕ ಅಂಜನ್ ಹೇಳಿಕೆ ಹೊರಬಿದ್ದಿದೆ.ಅದಾಗ್ಯೂ, ಮುಖ್ಯಮಂತ್ರಿಗಳು ಅಂತಹ ಶಬ್ದಗಳನ್ನು ಬಳಸಬಾರದಿತ್ತು ಎಂದೂ ಅಂಜನ್ ಹೇಳಿದ್ದಾರೆ. ಅಚ್ಯುತಾನಂದನ್ ಅವರು "ಅದು ಸಂದೀಪ್ ಮನೆಯಲ್ಲದಿದ್ದರೆ, ಒಂದು ನಾಯಿಯೂ ಅತ್ತ ಇಣುಕುತ್ತಿರಲಿಲ್ಲ" ಎಂಬ ಹೇಳಿಕೆ ನೀಡಿ ವಿವಾದದಲ್ಲಿ ಸಿಲುಕಿದ್ದಾರೆ. ಆದರೆ ತನ್ನ ಹೇಳಿಕೆಗೆ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಹೇಳಿರುವ ಅಚ್ಯುತಾನಂದನ್ ತನ್ನ ಹೇಳಿಕೆಯಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ." ಕರ್ನಾಟಕದ ಮುಖ್ಯಮಂತ್ರಿ ಬೆಳಿಗ್ಗೆಯೇ ಬಂದಿದ್ದರೂ ಕೇರಳ ಮುಖ್ಯಮಂತ್ರಿ ಬರಲಿಲ್ಲ ಎಂದು ಸಂದೀಪ್ ತಂದೆ ಹೇಳುತ್ತಾರೆ. ಅದೇನು? ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಜತೆಯಲ್ಲೇ ಹೋಗಬೇಕೆಂಬ ಕಾನೂನು ಇದೆಯೇ? ಅವರು ಈ ಕುರಿತು ಪೂರ್ವತಯಾರಿ ನಡೆಸಿದ್ದಾರೆ" ಎಂದು ಅಚ್ಯುತಾನಂದನ್ ತಿರುವನಂತಪುರಂನಂನಲ್ಲಿ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.ಅದು ಸಂದೀಪ್‌ನ ಕುಟುಂಬವಾಗಿರುವ ಕಾರಣ ನಾವು ಅಲ್ಲಿಗೆ ತೆರಳಿದ್ದೇವೆ, ಒಬ್ಬ ಯೋಧನ ತಂದೆ ಇದನ್ನು ಅರ್ಥಮಾಡಿಕೊಳ್ಳಬೇಕಿತ್ತು ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ. |