ಅತಿಹೆಚ್ಚಿನ ಜನದಟ್ಟಣೆಯ ಸಮಯದಲ್ಲಿ ಛತ್ರಪತಿ ಶಿವಾಜಿ ಟರ್ಮಿನಲ್‌ನಲ್ಲಿ ದಾಳಿ ನಡೆಸಲು ಬಯಸಿದ್ದೆವು ಎಂದು ಸೆರೆಸಿಕ್ಕಿರುವ ಉಗ್ರ ಅಜ್ಮಲ್ ಅಮಿರ್ ಕಸಬ್ ತನಿಖೆಯ ವೇಳೆ ಹೇಳಿದ್ದಾನೆ.
ನಾರಿಮನ್ ಹೌಸ್ ಬಿಟ್ಟರೆ ಉಳಿದೆಲ್ಲೆಡೆ ಸಾಯಂಕಾಲ ಏಳರಿಂದ ಎಂಟು ಗಂಟೆಯೊಳಗಾಗಿ ದಾಳಿ ನಡೆಸಬೇಕು ಎಂದು ನಿರ್ಧರಿಸಿದ್ದೆವು. ಆದರೆ, ಇಲ್ಲಿಗೆ ಬಂದಿಳಿಯುವಾಗಲೇ 8.45 ಆಗಿರುವ ಕಾರಣ ದಾಳಿ ವಿಳಂಬವಾಯಿತು ಎಂದು ಆತ ಹೇಳಿದ್ದಾನೆ.
ಸಿಎಸ್‌ಟಿಯಲ್ಲಿ ಸಾಯಂಕಾಲ ಏಳೂವರೆಯ ವೇಳೆಗೆ ಜನದಟ್ಟಣೆ ಅಧಿಕವಾಗಿರುವ ಕಾರಣ ಗುಂಡುದಾಳಿಯು ಅತಿ ಹೆಚ್ಚು ಹಾನಿ ಮಾಡಬಹುದು ಎಂದು ಅವರಿಗೆ ತಿಳಿದಿತ್ತು ಎಂದು ಅನಾಮಧೇಯವಾಗಿ ಉಳಿಯಲು ಬಯಸುವ ಅಧಿಕಾರಿಯೊಬ್ಬರು ಹೇಳಿದ್ದಾರೆ. "ಕಾಮಾ ಆಸ್ಪತ್ರೆ ಮತ್ತು ಮೆಟ್ರೋ ಚಿತ್ರಮಂದಿರವು ತಮ್ಮ ಗುರಿಯಾಗಿರಲಿಲ್ಲ. ಸಿಎಸ್‌ಟಿಯಿಂದ ಕೆಲವರನ್ನು ಒತ್ತೆಯಾಳುಗಳಾಗಿರಿಸಿ ಗೇಟ್ ವೇಯಿಂದ ಬೋಟೋಂದನ್ನು ಅಪಹರಿಸಿ ಮರಳುವುದು ಉದ್ದೇಶವಾಗಿತ್ತು" ಎಂದು ಕಸಬ್ ಹೇಳಿದ್ದಾನೆನ್ನಲಾಗಿದೆ.
ಪೋರಬಂದರಿನಲ್ಲಿ ಮೀನುಗಾರರ ದೋಣಿಯನ್ನು ಅಪಹರಿಸುವಾಗ ತಡವಾಗಿರುವುದು ವಿಳಂಬಕ್ಕೆ ಕಾರಣ ಎಂದು ಆತ ಹೇಳಿದ್ದಾನೆ.
ಸಿಎಸ್‌ಟಿಯಲ್ಲಿ ದಾಳಿನಡೆಸಿರುವ ಇಬ್ಬರು ಉಗ್ರರು ಬಳಿಕ ಜನತೆಯ ಗುಂಪಿನಲ್ಲಿ ಮರೆಯಾಗುವ ಯೋಜನೆ ಹೊಂದಿದ್ದರು. ಉಗ್ರರು ತಮ್ಮ ದುಷ್ಕೃತ್ಯದ ಬಳಿಕ ಸಮುದ್ರ ಮಾರ್ಗವಾಗಿ ಪಾಕಿಸ್ತಾನಕ್ಕೆ ಹಿಂತಿರುಗಲು ಬಯಸಿದ್ದರೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗುಪ್ತಚರ ಇಲಾಖೆ ಮತ್ತು ಮುಂಬೈ ಪೊಲೀಸರ ಪ್ರಕಾರ 10 ಮಂದಿ ಉಗ್ರರು ಮಾತ್ರ ಮುಂಬೈಗೆ ಬಂದಿಳಿದಿದ್ದಾರೆ. ಕುಬೇರ್ ಎಂಬ ದೋಣಿಯಲ್ಲಿ ಉಗ್ರರು ಪ್ರಯಾಣಿಸಿದ್ದು ಇದರಲ್ಲಿ 10 ಜಾಕೆಟ್‌ಗಳು ಮಾತ್ರ ಪತ್ತೆಯಾಗಿವೆ ಎಂದು ಕರಾವಳಿ ಕಾವಲು ಪಡೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇದಲ್ಲದೆ ದೋಣಿಯಲ್ಲಿ ಕೆಲವು ಸೌಂದರ್ಯ ಸಾಧನಗಳು ಮತ್ತು ಕಂಬಳಿಗಳೂ ಪತ್ತೆಯಾಗಿವೆ ಎಂದೂ ಅವರು ಹೇಳಿದ್ದಾರೆ. |